ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ನ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಕ್ರಮಣಕಾರಿ ಆರಂಭ ಪಡೆದರೂ, ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಅಜಾಗರೂಕತೆಯಿಂದ ವಿಕೆಟ್ ಒಪ್ಪಿಸಿದ್ದು ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಂಪ್ರದಾಯಿಕ ವೈರಿಗಳ ವಿರುದ್ಧದ ಈ ಪ್ರಮುಖ ಪಂದ್ಯದಲ್ಲಿ ವೈಭವ್ ಅವರ ಶಾಟ್ ಸೆಲೆಕ್ಷನ್ ವಿರುದ್ಧ ಅಭಿಷೇಕ್ ಶರ್ಮಾ ವ್ಯಕ್ತಪಡಿಸಿದ ಆಕ್ರೋಶದ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಂದ್ಯದಲ್ಲಿ ಕೇವಲ 9 ಎಸೆತಗಳನ್ನು ಎದುರಿಸಿದ 15 ವರ್ಷದ ವೈಭವ್ ಸೂರ್ಯವಂಶಿ, 2 ಭರ್ಜರಿ ಸಿಕ್ಸರ್ಗಳನ್ನು ಬಾರಿಸಿ ಬಿರುಗಾಳಿ ಆರಂಭದ ಮುನ್ಸೂಚನೆ ನೀಡಿದ್ದರು. ಆದರೆ, ಪಾಕಿಸ್ತಾನದ ಬೌಲರ್ ಸೈಮ್ ಅಯೂಬ್ ಎಸೆದ ವೇಗದ ಎಸೆತಕ್ಕೆ ಅನಗತ್ಯವಾಗಿ ರಿವರ್ಸ್ ಸ್ವೀಪ್ ಮಾಡಲು ಹೋಗಿ ವಿಕೆಟ್ ಕೀಪರ್ ಉಸ್ಮಾನ್ ಖಾನ್ ಅವರಿಗೆ ಕಷ್ಟಕರವಾದ ಕ್ಯಾಚ್ ನೀಡಿದರು. ಕೀಪರ್ ಮೊದಲ ಪ್ರಯತ್ನದಲ್ಲಿ ಕೈಚೆಲ್ಲಿದರೂ ಅಂತಿಮವಾಗಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು.
ತಂಡಕ್ಕೆ ಉತ್ತಮ ಅಡಿಪಾಯ ಸಿಗುತ್ತಿದ್ದ ಹಂತದಲ್ಲೇ ಅಸಹಜ ಶಾಟ್ ಹೊಡೆದು ವಿಕೆಟ್ ಕಳೆದುಕೊಂಡಿದ್ದನ್ನು ಕಂಡು ಮತ್ತೊಂದು ತುದಿಯಲ್ಲಿದ್ದ ಅಭಿಷೇಕ್ ಶರ್ಮಾ ತೀವ್ರ ನಿರಾಶೆಗೊಂಡರು. ಮೈದಾನದಲ್ಲೇ ವೈಭವ್ ಕಡೆಗೆ ಸೈಗೆ ಮಾಡುತ್ತಾ, ತಕ್ಷಣವೇ ಪೆವಿಲಿಯನ್ಗೆ ತೆರಳುವಂತೆ ಸೂಚಿಸಿದರು. ಇಂತಹ ಮಹತ್ವದ ಪಂದ್ಯದಲ್ಲಿ ಜವಾಬ್ದಾರಿಯುತ ಆಟದ ಅಗತ್ಯವಿತ್ತು ಎಂಬುದು ಅಭಿಷೇಕ್ ಅವರ ಕೋಪಕ್ಕೆ ಮುಖ್ಯ ಕಾರಣವಾಗಿತ್ತು.
ಮತ್ತೊಂದೆಡೆ, ಈ ಆಘಾತದ ನಡುವೆಯೂ ಅದ್ಭುತ ಬ್ಯಾಟಿಂಗ್ ಮುಂದುವರಿಸಿದ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಒಟ್ಟು 28 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್ಗಳ ನೆರವಿನಿಂದ 61 ರನ್ ಬಾರಿಸಿದ ಅವರು ಭಾರತಕ್ಕೆ ಪ್ರಚಂಡ ಆರಂಭ ನೀಡಿದರು.

