ಯಜಮಾನರು ವೇದಿಕೆ ಮೇಲೆ ಯಡಿಯೂರಪ್ಪ ಅವರ ಪುತ್ರನನ್ನು ಗೆಲ್ಲಿಸಿ ಎಂದು ಮಾತನಾಡಿದ್ದರು. ಆಗ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಿಂದ ಅಮಾನತು ಮಾಡಿದ ಬೆನ್ನಲ್ಲೇ ಆಕ್ರೋಶ ಹೊರಹಾಕಿರುವ ಅವರು, ನನಗೆ ಇದುವರೆಗೆ ಅಮಾನತು ಮಾಡಿರುವ ಪತ್ರ ಬಂದಿಲ್ಲ. ಮಾಧ್ಯಮದವರಿಂದಲೇ ಈ ಬಗ್ಗೆ ಕೇಳುತ್ತಿದ್ದೇನೆ. ನನಗೆ ಆದೇಶ ಬರಲಿ. ಸರಿಯಾಗಿ ಉತ್ತರ ನೀಡುತ್ತೇನೆ. ನನ್ನ ಆಡಿಯೋ ವಿಡಿಯೋ ಇದ್ದರೆ ಟಿವಿ ಮೂಲಕ ತೋರಿಸಬೇಕಲ್ಲ. ಯಾವ ಆಧಾರದ ಮೇಲೆ ನನ್ನನ್ನು ಅಮಾನತು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಶಾಮನೂರು ಕುಟುಂಬದ ಒಬ್ಬರು ಮಂತ್ರಿಯಾಗಿದ್ದಾರೆ. ಮತ್ತೊಬ್ಬರು ಸಂಸದರಾಗಿದ್ದಾರೆ. ಅವರಿಗೆ ಯಾಕೆ ಟಿಕೆಟ್ ಕೊಡುತ್ತೀರಿ? ನಮ್ಮ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಮಗೆ ಟಿಕೆಟ್ ಕೊಡಿ ಎಂದು ಕೇಳಿದ್ದೆವು. ಪ್ರಚಾರಕ್ಕೆ ಯಾರೂ ನನ್ನನ್ನು ಕರೆದಿಲ್ಲ. ಮಲ್ಲಿಕಾರ್ಜುನ ಅವರು ನನ್ನನ್ನು ಕರೆಯದ ಕಾರಣ ಪ್ರಚಾರಕ್ಕೆ ಹೋಗಿಲ್ಲ. ನಮ್ಮ ಕ್ಷೇತ್ರವಾದರೂ ಅಭ್ಯರ್ಥಿಯಾಗಲಿ, ಅವರ ತಾಯಿಯಾಗಲಿ ನನ್ನ ಹತ್ತಿರ ಬಂದು ಮಾತನಾಡಿಲ್ಲ. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ವಇಚ್ಚೆಯಿಂದ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

