ಹಾಸನ: ಇದೆಂತಹ ಕುರುಡು ಪ್ರೀತಿ. ಪ್ರೀತಿ ಕುರುಡು ಎನ್ನುತ್ತಾರೆ. ಆದರೆ ಮದುವೆಯಾಗಿ ಏಳು ವರ್ಷದ ಮಗನಿದ್ದರೂ ಮತ್ತೋರ್ವನನ್ನು ಪ್ರೀತಿಸಿ ಪತಿ-ಮಗನನ್ನು ಬಿಟ್ಟು ಪ್ರಿಯತಮನೊಂದಿಗೆ ವಿವಾಹವಾಗಿ ಮಹಿಳೆ ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ. ಕುಟುಂಬದವರೇ ನೋಡಿ ಸಂಬಂಧಿಕರಲ್ಲಿಯೇ ವಿವಾಹವಾಗಿ ಎಂಟು ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ನಡೆಸಿದ್ದ ಮಹಿಳೆಯೊಬ್ಬಳು ತನ್ನ 7 ವರ್ಷದ ಮಗ ಹಾಗೂ ಪತಿಯನ್ನು ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿದ್ದೂ ಅಲ್ಲದೇ ಕಾರಿನಲ್ಲೇ ವಿವಾಹವಾಗಿರುವ ವಿಚಿತ್ರ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುಂಡಗೋಡು ಗ್ರಾಮದ ಹರ್ಷಿತಾ ಎಂಬ ಮಹಿಳೆ ಪತಿ ಹಾಗೂ ಮಗನನ್ನು ಬಿಟ್ಟು ತನ್ನ ಪ್ರಿಯಕರನ ಜೊತೆ ಕಾರಿನಲ್ಲಿಯೇ ಮದುವೆಯಾಗಿದ್ದಾಳೆ. ಒಂದು ಬಾರಿ ಓಡಿಹೋಗಲು ಯತ್ನಿಸಿದ್ದಾಗ ಪೋಷಕರ ದೂರಿನ ಮೇರೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಮನವೊಲಿಸಿ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರಂತೆ. ಆದರೆ ಅಲ್ಲಿಂದಲೂ ಹೇಗೋ ತಪ್ಪಿಸಿಕೊಂಡ ಹರ್ಷಿತಾ ಮತ್ತೆ ಪ್ರಿಯಕರನ ಸಂಪರ್ಕದಲ್ಲಿದ್ದಳು.
ಹರ್ಷಿತಾಗೆ 2017ರಲ್ಲಿ ಹಾಸನ ತಾಲೂಕಿನ ಮುಕಂದೂರು ಗ್ರಾಮದ ಪ್ರಕಾಶ್ ಅವರೊಂದಿಗೆ ವಿವಾಹವಾಗಿತ್ತು. ಪ್ರಕಾಶ್ ಅವರು ಹರ್ಷಿತಾಳ ಅತ್ತೆಯ ಮಗನಾಗಿದ್ದು, ದಂಪತಿಗೆ ಏಳು ವರ್ಷದ ಗಂಡು ಮಗನಿದ್ದಾನೆ. ಮಾರ್ಚ್ 30ರಂದು ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ ಹರ್ಷಿತಾ ಮನೆಗೆ ವಾಪಸ್ ಆಗಿಲ್ಲ.
ಪತ್ನಿ ಕಾಣುತ್ತಿಲ್ಲ ಎಂದು ಪತಿ ಹಾಗೂ ಮಗಳು ಕಾಣೆಯಾಗಿದ್ದಾಳೆ ಎಂದು ಹರ್ಷಿತಾ ಪೋಷಕರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹರ್ಷಿತಾಳನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದರು.
ಈ ವೇಳೆ ಪತಿ ಪ್ರಕಾಶ್ ಜೊತೆ ಹೋಗಲು ನಿರಾಕರಿಸಿದ ಹರ್ಷಿತಾ, ತನ್ನ ಪ್ರಿಯಕರ ಸಚಿನ್ ಜೊತೆಗೇ ಹೋಗುವುದಾಗಿ ಹಠ ಹಿಡಿದಿದ್ದಳು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು.
ಸಾಂತ್ವನ ಕೇಂದ್ರದಲ್ಲಿದ್ದ ಹರ್ಷಿತಾ, ತನಗೆ ಆರೋಗ್ಯ ಸರಿಯಿಲ್ಲ ಎಂದು ನಾಟಕವಾಡಿ ಆಸ್ಪತ್ರೆಗೆ ಹೋಗುವ ನೆಪದಲ್ಲಿ ಸಾಂತ್ವನ ಕೇಂದ್ರದಿಂದ ಹೊರಬಂದಿದ್ದಾಳೆ. ಬಳಿಕ ಅಲ್ಲಿಂದಲೇ ತನ್ನ ಪ್ರಿಯಕರ ಸಚಿನ್ ಜೊತೆ ಕಾರಿನಲ್ಲಿ ತೆರಳಿ ಕಾರಿನಲ್ಲಿಯೇ ವಿವಾಹವಾಗಿದ್ದಾಳೆ. ಹರ್ಷಿತಾಳ ಹುಚ್ಚಾಟಕ್ಕೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

