ನವದೆಹಲಿ : ಸಹ ಪೈಲಟ್‌ವೊಬ್ಬರು ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಆರೋಪದ ನಡುವೆ, ಪ್ರಯಾಣಿಕರು ಮತ್ತು ಸಿಬ್ಬಂದಿಯ ಜೀವ ಉಳಿಸಲು ಧೈರ್ಯದಿಂದ ಪರಿಸ್ಥಿತಿ ನಿಭಾಯಿಸಿದ ಫ್ಲೈದುಬೈ ವಿಮಾನದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದೂರವಾಣಿ/ವಿಡಿಯೋ ಕರೆ ಮೂಲಕ ಮಾತುಕತೆ ನಡೆಸಿದರು. ಈ ವೇಳೆ ಮೋದಿ ಅವರು ಪೈಲಟ್‌ನ ಧೈರ್ಯವನ್ನು ಶ್ಲಾಘಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ವೈರಲ್ ಆಗಿರುವ ವಿಡಿಯೋದಲ್ಲಿ ಸ್ಮಿತ್ ಮಚ್ಚಾರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಕಾಣಿಸುತ್ತದೆ. ಅವರ ತಲೆಗೆ ಬ್ಯಾಂಡೇಜ್ ಹಾಕಲಾಗಿದ್ದು, ಮೂಗಿನ ಮೂಲಕ ಟ್ಯೂಬ್ ಅಳವಡಿಸಲಾಗಿದೆ. ಇದೇ ವೇಳೆ ಪ್ರಧಾನಿ ಮೋದಿ ಅವರು ವಿಡಿಯೋ ಕಾಲ್ ಮೂಲಕ ಅವರೊಂದಿಗೆ ಮಾತನಾಡುತ್ತಿರುವ ದೃಶ್ಯವೂ ಕಂಡುಬಂದಿದೆ.
ಮಾತುಕತೆಯ ವೇಳೆ ಮಚ್ಚಾರ್ ಅವರು ವಿಮಾನದಲ್ಲಿ ನಡೆದ ಘಟನೆಯ ಬಗ್ಗೆ ಪ್ರಧಾನಿಗೆ ವಿವರಿಸಿದರು. ಅಪಾಯದ ಸಂದರ್ಭದಲ್ಲಿ ಧೈರ್ಯದಿಂದ ಕಾರ್ಯನಿರ್ವಹಿಸಲು ತಮಗೆ ಏನು ಪ್ರೇರಣೆ ನೀಡಿತು ಎಂಬುದನ್ನೂ ಅವರು ಹಂಚಿಕೊಂಡರು. ಸಹ ಪೈಲಟ್ ದಾಳಿ ನಡೆಸಿದ ಬಳಿಕ ಕಾಕ್‌ಪಿಟ್‌ನಲ್ಲೇ ತಾವು ಹನುಮಾನ್ ಚಾಲೀಸಾ ಪಠಿಸಿದ್ದಾಗಿ ಮಚ್ಚಾರ್ ತಿಳಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (UAE) ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ FZ1073ನಲ್ಲಿ ಸಂಭವಿಸಿದ ಈ ಘಟನೆಯ ಸಂದರ್ಭದಲ್ಲಿ ಸಂಭವನೀಯ ಭಾರೀ ದುರಂತವನ್ನು ತಪ್ಪಿಸುವಲ್ಲಿ ಮಚ್ಚಾರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವರದಿಯಾಗಿದೆ. ವಿಮಾನವನ್ನು ಪತನಗೊಳಿಸಲು ಸಹ ಪೈಲಟ್ ಯತ್ನಿಸಿದ್ದಾನೆ ಎಂಬ ಆರೋಪದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದಕ್ಕೂ ಒಂದು ದಿನ ಮೊದಲು, ಗುರುವಾರ ಪ್ರಧಾನಿ ಮೋದಿ ಅವರು ಮಚ್ಚಾರ್ ಅವರ ಪತ್ನಿ ಹಾಗೂ ಪೋಷಕರೊಂದಿಗೆ ಮಾತನಾಡಿದ್ದರು. ಗಾಯಗೊಂಡ ಪೈಲಟ್ ಮತ್ತು ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ಭಾರತೀಯ ರಾಯಭಾರ ಕಚೇರಿಗಳು ಮತ್ತು ದೌತ್ಯ ಕಚೇರಿಗಳ ಮೂಲಕ ಒದಗಿಸುವುದಾಗಿ ಅವರು ಭರವಸೆ ನೀಡಿದ್ದರು.
ಈ ವೇಳೆ ಮಚ್ಚಾರ್ ಅವರ ಧೈರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದರು. ಅವರ ಸಮಯೋಚಿತ ಕ್ರಮದಿಂದ ನೂರಾರು ಪ್ರಯಾಣಿಕರ ಜೀವ ಉಳಿದಿದ್ದು, ಭಾರೀ ದುರಂತವೊಂದು ತಪ್ಪಿದೆ ಎಂದು ಮೋದಿ ಕುಟುಂಬದವರಿಗೆ ತಿಳಿಸಿದ್ದರು.
‘ನಾನು ಎದ್ದೇಳದಿದ್ದರೆ ಸತ್ತೇ ಹೋಗುತ್ತಿದ್ದೆ’ : ಪ್ರಧಾನಿ ಮೋದಿ ಜೊತೆ ಭೀಕರ ಅನುಭವ ಹಂಚಿಕೊಂಡ ಕ್ಯಾಪ್ಟನ್ ಸ್ಮಿತ್
ಫ್ಲೈದುಬೈ ವಿಮಾನದಲ್ಲಿ ಒಮಾನ್ ಮೂಲದ ಸಹ ಪೈಲಟ್‌ನಿಂದ ಚೂರಿ ಇರಿತಕ್ಕೊಳಗಾದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದರು. ಈ ವೇಳೆ ಭಯಾನಕ ದಾಳಿಯ ಕ್ಷಣಗಳನ್ನು ವಿವರಿಸಿದ ಅವರು, ಆ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ ಎಂದು ತಿಳಿಸಿದರು.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ, ತಾವು ಎದ್ದು ಪರಿಸ್ಥಿತಿಯನ್ನು ನಿಯಂತ್ರಿಸಬೇಕಿತ್ತು. ಇಲ್ಲದಿದ್ದರೆ ತಾವು ಸತ್ತೇ ಹೋಗುತ್ತಿದ್ದೆ ಎಂದು ಸ್ಮಿತ್ ಮಚ್ಚಾರ್ ಪ್ರಧಾನಿ ಮೋದಿಗೆ ತಿಳಿಸಿದರು.
ಶುಕ್ರವಾರ ನಡೆದ ವಿಡಿಯೋ ಸಂಭಾಷಣೆಯಲ್ಲಿ ಪ್ರಧಾನಿ ಮೋದಿ ಅವರು ಪೈಲಟ್‌ನ ಧೈರ್ಯ, ಸಮಯಪ್ರಜ್ಞೆ ಮತ್ತು ಸ್ಥೈರ್ಯವನ್ನು ಶ್ಲಾಘಿಸಿದರು. ಇಡೀ ದೇಶವೇ ಅವರಿಗಾಗಿ ಪ್ರಾರ್ಥಿಸುತ್ತಿದೆ ಎಂದು ಹೇಳಿದರು.
ಸದ್ಯ 39 ವರ್ಷದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಯುಎಇಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ 174 ಪ್ರಯಾಣಿಕರು ಹಾಗೂ 8 ಸಿಬ್ಬಂದಿಯನ್ನು ಹೊತ್ತಿದ್ದ ಫ್ಲೈದುಬೈ ವಿಮಾನ ಸೌದಿ ಅರೇಬಿಯಾದ ತಬೂಕ್‌ನಲ್ಲಿ ಇಳಿದಿತ್ತು. ಆರಂಭದಲ್ಲಿ ತಬೂಕ್‌ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಮಚ್ಚಾರ್ ಅವರನ್ನು ಬಳಿಕ ಯುಎಇಗೆ ಸ್ಥಳಾಂತರಿಸಲಾಯಿತು.
ಪ್ರಧಾನಿ ಮೋದಿಯವರೊಂದಿಗೆ ಮಾತನಾಡುವ ವೇಳೆ ಸ್ಮಿತ್ ಭಾವುಕರಾದರು. ಇದು ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದು ಎಂದು ಹೇಳಿದರು.
“ನೀವು ನನ್ನ ದೊಡ್ಡ ಆದರ್ಶ. ನೀವು ನನಗೆ ಕರೆ ಮಾಡಿ ಪ್ರೋತ್ಸಾಹಿಸುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ನನಗೆ ಸಾಕಷ್ಟು ಗಾಯಗಳಾಗಿದ್ದವು. ಆದರೆ ನಾನು ಎದ್ದು ಕಾರ್ಯನಿರ್ವಹಿಸಲೇಬೇಕು ಎಂದು ನನಗೆ ನಾನೇ ಹೇಳಿಕೊಂಡೆ. ಆ ಕ್ಷಣದಲ್ಲಿ ನಾನು ನನ್ನ ಜೀವಕ್ಕಾಗಿ ಹೋರಾಡುತ್ತಿದ್ದೆ. ನಾನು ಕೆಳಗೆ ಬಿದ್ದಿದ್ದೆ. ಆದರೆ ನಾನು ಎದ್ದು ನಿಲ್ಲದಿದ್ದರೆ ಸತ್ತೇ ಹೋಗುತ್ತಿದ್ದೆ ಎಂಬುದು ನನಗೆ ಅರ್ಥವಾಯಿತು” ಎಂದು ಸ್ಮಿತ್ ಮಚ್ಚಾರ್ ಪ್ರಧಾನಿ ಮೋದಿಗೆ ತಿಳಿಸಿದರು.
ತಾವು 17 ವರ್ಷಕ್ಕೂ ಹೆಚ್ಚು ಕಾಲ ವಿಮಾನ ಹಾರಿಸುತ್ತಿದ್ದು, ಕಳೆದ 11 ವರ್ಷಗಳಿಂದ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಅವರು ಹೇಳಿದರು.
“ಕಣ್ಣು ಮುಚ್ಚಿದ್ದರೂ ವಿಮಾನದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಯಿತು. ಕೊನೆಯ ಪ್ರಯತ್ನ ಮಾಡಲೇಬೇಕು ಎಂದು ನನಗೆ ತಿಳಿದಿತ್ತು. ನಾನು ನನ್ನನ್ನು ಒತ್ತಾಯಿಸಿಕೊಂಡು ಕಾಕ್‌ಪಿಟ್ ಬಾಗಿಲು ತೆರೆಯಲು ಪ್ರಯತ್ನಿಸಿದೆ. ಬಾಗಿಲು ತೆರೆದ ಬಳಿಕ ಉಳಿದವರೆಲ್ಲರೂ ಒಳಗೆ ಬಂದರು. ನಡೆದ ಘಟನೆಯಲ್ಲಿ ಪ್ರತಿಯೊಬ್ಬರೂ ಸಮಾನ ಪಾತ್ರ ವಹಿಸಿದ್ದಾರೆ” ಎಂದು ಅವರು ವಿವರಿಸಿದರು.
ತಾವು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಹನುಮಾನ್ ಚಾಲೀಸಾ ಪಠಿಸುತ್ತೇನೆ ಎಂದು ಸ್ಮಿತ್ ಹೇಳಿದರು. ಬುಧವಾರ ನಡೆದ ದಾಳಿಯ ಸಂದರ್ಭದಲ್ಲೂ ತಾವು ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ಸ್ಮಿತ್ ಅವರ ತಾಯಿ ಗೀತಾ ಅವರೊಂದಿಗೂ ಮಾತನಾಡಿರುವುದಾಗಿ ತಿಳಿಸಿದರು. ಭಗವದ್ಗೀತೆಯ ಮೌಲ್ಯಗಳು ಮತ್ತು ಬೋಧನೆಗಳೊಂದಿಗೆ ಅವರು ಸ್ಮಿತ್ ಅವರನ್ನು ಬೆಳೆಸಿದ್ದಾರೆ ಎಂದು ಹೇಳಿದರು.
“ಭಾರತೀಯರು ಜೀವ ತೆಗೆಯುವವರಲ್ಲ; ಬದಲಾಗಿ ಇತರರ ಜೀವ ಉಳಿಸಲು ತಮ್ಮದೇ ಜೀವವನ್ನು ಅಪಾಯಕ್ಕೆ ಒಡ್ಡುವವರು” ಎಂದು ದೇಶ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ಮೋದಿ ತಿಳಿಸಿದರು.ಶೀಘ್ರದಲ್ಲೇ ಭಾರತಕ್ಕೆ ಮರಳುವ ಸ್ಮಿತ್ ಅವರನ್ನು ಸ್ವಾಗತಿಸಲು ದೇಶವೇ ಕಾಯುತ್ತಿದೆ ಎಂದು ಪ್ರಧಾನಿ ಹೇಳಿದರು. ಅವರ ಶೀಘ್ರ ಗುಣಮುಖತೆಗಾಗಿ ದೇಶದಾದ್ಯಂತ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಗಾಯಗೊಂಡ ಪೈಲಟ್‌ಗೆ ಚಿಕಿತ್ಸೆ ಹಾಗೂ ನೆರವು ನೀಡುತ್ತಿರುವ ಸೌದಿ ಅರೇಬಿಯಾ ಮತ್ತು ಯುಎಇ ಸರ್ಕಾರಗಳಿಗೆ ಮೋದಿ ಧನ್ಯವಾದ ಸಲ್ಲಿಸಿದರು. “ನಿಮಗೆ ಯಾವಾಗ ಬೇಕಾದರೂ ನಾನು ಕೇವಲ ಒಂದು ಫೋನ್ ಕಾಲ್ ದೂರದಲ್ಲಿದ್ದೇನೆ” ಎಂದು ಸ್ಮಿತ್‌ಗೆ ಭರವಸೆ ನೀಡಿದರು.
ಸ್ಮಿತ್ ಮಚ್ಚಾರ್ ಅವರ ಧೈರ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಅವರು ಜಗತ್ತಿಗೆ ‘ಅಹಿಂಸೆ’ಯ ಅರ್ಥವನ್ನು ತೋರಿಸಿದ್ದಾರೆ ಮತ್ತು ವಿಮಾನದಲ್ಲಿದ್ದ ಎಲ್ಲರ ಜೀವ ಉಳಿಸುವ ಮೂಲಕ ದೊಡ್ಡ ಸೇವೆ ಮಾಡಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಉಲ್ಲೇಖಿಸಿದ ಮೋದಿ, ಪರಿಸ್ಥಿತಿ ಬೇರೆ ರೀತಿಯಲ್ಲಿ ಅಂತ್ಯಗೊಂಡಿದ್ದರೆ ಭಾರತದ ಬಗ್ಗೆ ಜನರು ಏನು ಹೇಳುತ್ತಿದ್ದರು ಎಂಬ ಚರ್ಚೆಗಳೂ ನಡೆದಿವೆ ಎಂದು ಹೇಳಿದರು. ಆದರೆ ಸ್ಮಿತ್ ಮಚ್ಚಾರ್ “ದೊಡ್ಡ ಕೆಲಸ ಮಾಡಿ ಎಲ್ಲರನ್ನೂ ಉಳಿಸಿದ್ದಾರೆ” ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

