ವಿಶ್ವದ ದೊಡ್ಡ ದೊಡ್ಡ ಆರ್ಥಿಕತೆಗಳನ್ನೂ ಮಣಿಸಬಲ್ಲ ಶಕ್ತಿ ನಮ್ಮ ಭಾರತೀಯರ ಮನೆಯ ಲಾಕರ್‌ನಲ್ಲಿದೆ ಹೌದು ಭಾರತೀಯರಿಗೆ ಬಂಗಾರವೆಂದರೆ ಬರೀ ಅಲಂಕಾರವಲ್ಲ, ಅದೊಂದು ಭದ್ರತೆಯ ಭರವಸೆ. ಅಮೆರಿಕ-ಚೀನಾದಂತಹ ಆರ್ಥಿಕತೆಗಳೂ ಹುಬ್ಬೇರಿಸುವಂತೆ ಮಾಡಿದೆ ಭಾರತದ ಮನೆ-ಮನಗಳಲ್ಲಿರುವ ಚಿನ್ನದ ದಾಸ್ತಾನು. ಈ ಬೃಹತ್ ಆಸ್ತಿಯ ಮೌಲ್ಯದ ಮುಂದೆ ವಿಶ್ವದ ಬಲಿಷ್ಠ ರಾಷ್ಟ್ರಗಳ ಜಿಡಿಪಿಯೇ ಮಂಕಾಗಲಿದೆ
ಅಮೆರಿಕ-ಚೀನಾ ಬ್ಯಾಂಕುಗಳಿಗೂ ನಡುಕ
ಅಸ್ಸೋಚಾಮ್ (ASSOCHAM) ವರದಿಯ ಪ್ರಕಾರ, ಭಾರತದ ಮನೆಗಳು ಮತ್ತು ದೇಗುಲಗಳಲ್ಲಿ ಒಟ್ಟು 50 ಸಾವಿರ ಟನ್ ಮೌಲ್ಯದ ಚಿನ್ನವಿದೆ. ಇದರ ಇಂದಿನ ಮೌಲ್ಯ ಅಂದಾಜು 10 ಟ್ರಿಲಿಯನ್ ಡಾಲರ್ ಅಥವಾ 830 ಲಕ್ಷ ಕೋಟಿ ರೂಪಾಯಿಗಳು ಅಸ್ಸೋಚಾಮ್ (ASSOCHAM) ವರದಿಯ ಪ್ರಕಾರ, ವಿಶ್ವದ ಟಾಪ್ 10 ದೇಶಗಳ ಕೇಂದ್ರ ಬ್ಯಾಂಕುಗಳ ಬಳಿ ಇರುವ ಒಟ್ಟು ಚಿನ್ನಕ್ಕಿಂತಲೂ ಭಾರತೀಯ ಜನರ ಬಳಿ ಇರುವ ಚಿನ್ನವೇ ಅಧಿಕವಾಗಿದೆ.
ವಿಶ್ವ ಗೋಲ್ಡ್ ಕೌನ್ಸಿಲ್ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) 880.3 ಟನ್ ಚಿನ್ನವನ್ನು ಹೊಂದಿದ್ದು, ವಿಶ್ವದ 8ನೇ ಸ್ಥಾನದಲ್ಲಿದೆ. ಆದರೆ, ಭಾರತೀಯರ ಖಾಸಗಿ ಚಿನ್ನದ ದಾಸ್ತಾನನ್ನು ಲೆಕ್ಕ ಹಾಕಿದರೆ ಭಾರತ ಜಗತ್ತಿನಲ್ಲೇ ನಂಬರ್ 1 ಸ್ಥಾನಕ್ಕೇರುತ್ತದೆ.ಭಾರತೀಯ ಕುಟುಂಬಗಳು ಬ್ಯಾಂಕ್ ಠೇವಣಿ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಒಟ್ಟು ಹಣಕ್ಕಿಂತಲೂ ಚಿನ್ನದ ಮೌಲ್ಯವು 175% ಪಟ್ಟು ಹೆಚ್ಚಾಗಿದೆ.
ಷೇರು ಮಾರುಕಟ್ಟೆ ಮತ್ತು ಬ್ಯಾಂಕ್ ಠೇವಣಿಗಿಂತಲೂ ಚಿನ್ನವೇ ಫೇವರಿಟ್
ಭಾರತೀಯರು ಬ್ಯಾಂಕ್ ಠೇವಣಿ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಒಟ್ಟು ಹಣಕ್ಕಿಂತಲೂ ಚಿನ್ನದ ಮೌಲ್ಯವು 175% ಪಟ್ಟು ಹೆಚ್ಚಿದೆ. ಅಂದರೆ, ಇಂದಿಗೂ ಭಾರತೀಯರು ಅತಿ ಹೆಚ್ಚು ನಂಬುವುದು ಬಂಗಾರವನ್ನೇ. ಭೂಮಿ ಮತ್ತು ಮನೆಯನ್ನು ಹೊರತುಪಡಿಸಿದರೆ, ಭಾರತೀಯರ ಒಟ್ಟು ಸಂಪತ್ತಿನಲ್ಲಿ ಶೇ. 65 ರಷ್ಟು ಪಾಲು ಚಿನ್ನದ್ದೇ ಆಗಿದೆ.
2047ರ ಹೊತ್ತಿಗೆ ಭಾರತವನ್ನು ನಂ. 1 ಮಾಡಬಲ್ಲದು ಈ ಚಿನ್ನ
ಅಸ್ಸೋಚಾಮ್ ವರದಿಯ ಪ್ರಕಾರ, ಜನರು ತಮ್ಮ ಬಳಿ ಇರುವ ಈ ಡೆಡ್ ಇನ್ವೆಸ್ಟ್ಮೆಂಟ್ ಅಥವಾ ಸುಮ್ಮನೆ ಬಿದ್ದಿರುವ ಚಿನ್ನವನ್ನು ಸರಿಯಾಗಿ ಬಳಸಿಕೊಂಡರೆ ಭಾರತದ ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ:
ಪ್ರತಿ ವರ್ಷ ಮನೆಯಲ್ಲಿರುವ ಕೇವಲ 2% ಚಿನ್ನವನ್ನು ಗೋಲ್ಡ್ ಮೊನಟೈಸೇಶನ್ ಸ್ಕೀಮ್ ಅಥವಾ ಉದ್ಯಮಗಳಲ್ಲಿ ಹೂಡಿಕೆ ಮಾಡಿದರೆ, 2047 ರ ವೇಳೆಗೆ ಭಾರತದ ಜಿಡಿಪಿಗೆ ಹೆಚ್ಚುವರಿಯಾಗಿ $7.5 ಟ್ರಿಲಿಯನ್ ಸೇರ್ಪಡೆಯಾಗಲಿದೆ.ಇದರಿಂದ 2047 ರಲ್ಲಿ ಭಾರತದ ಅಂದಾಜು ಜಿಡಿಪಿ $34 ಟ್ರಿಲಿಯನ್‌ನಿಂದ $41.5 ಟ್ರಿಲಿಯನ್‌ಗೆ ಜಿಗಿಯಬಹುದು
ಚಿನ್ನವನ್ನು ಕೇವಲ ಲಾಕರ್‌ನಲ್ಲಿ ಇಡುವ ಬದಲು, ಜನರು ಈಗ ಅದನ್ನು ಉತ್ಪಾದಕ ಕೆಲಸಗಳಿಗೆ ಬಳಸುತ್ತಿದ್ದಾರೆ. 2025 ರ ನವೆಂಬರ್ ವೇಳೆಗೆ ದೇಶದಲ್ಲಿ ಚಿನ್ನದ ಮೇಲಿನ ಸಾಲ (Gold Loan) ಬರೋಬ್ಬರಿ ₹24.34 ಲಕ್ಷ ಕೋಟಿ ತಲುಪಿದೆ. ಸಣ್ಣ ಉದ್ಯಮಗಳು ಮತ್ತು ಕೃಷಿ ಚಟುವಟಿಕೆಗಳಿಗೆ ಜನರು ಈಗ ಚಿನ್ನದ ಸಾಲವನ್ನೇ ಅವಲಂಬಿಸುತ್ತಿದ್ದಾರೆ.
ಬೆಲೆ ಏರಿಕೆಯಾದರೂ ಜನರು ಚಿನ್ನ ಮಾರಲ್ಲ ಏಕೆ?
ವರದಿಯ ಪ್ರಕಾರ, ಭಾರತದಲ್ಲಿ ಶೇ. 75-80 ರಷ್ಟು ಚಿನ್ನವು ಆಭರಣ ರೂಪದಲ್ಲಿದೆ. ಜನರು ಇದನ್ನು ಸಂಪ್ರದಾಯ ಮತ್ತು ದೀರ್ಘಕಾಲದ ಉಳಿತಾಯವೆಂದು ಪರಿಗಣಿಸುವುದರಿಂದ, ಬೆಲೆ ಎಷ್ಟೇ ಹೆಚ್ಚಾದರೂ ಜನರು ಅದನ್ನು ಸುಲಭವಾಗಿ ಮಾರಾಟ ಮಾಡುವುದಿಲ್ಲ. ಹೀಗಾಗಿ ಚಿನ್ನದ ಬೆಲೆ ಏರಿಕೆಯು ಜನರ ದೈನಂದಿನ ಖರ್ಚು ಅಥವಾ ಖರೀದಿ ಸಾಮರ್ಥ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿಲ್ಲ.

