ವಿಜಯಪುರ: ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಪ್ರಿಯಕರ ತನ್ನ ಜೊತೆಗಿನ ಫೋಟೋ ಕಳುಹಿಸಿ ಮದುವೆ ನಿಲ್ಲಿಸಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಮದುವೆಯಾಗಬೇಕಿದ್ದ ಯುವತಿ ತನ್ನ ಪ್ರಿಯಕರನೊಂದಿಗಿರುವ ಫೋಟೊ ನೋಡಿದ ಯುವಕನ ಕುಟುಂಬದವರು ವಿವಾಹ ರದ್ದುಗೊಳಿಸಿದ್ದಾರೆ. ಇದರಿಂದ ಅವಮಾನಗೊಂಡು ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
22 ವರ್ಷದ ಯುವತಿ ಜಯಶ್ರೀ ಬಿರಾದಾರ್ ಸಾವಿಗೆ ಶರಣಾದವಳು. ಜಯಶ್ರೀ ಈ ಮೊದಲು ಶ್ರೀಶೈಲ್ ಬಡಾನೂರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಕುಟುಂಬದವರು ಬೇರೆ ಯುವಕನೊಂದಿಗೆ ಮದುವೆ ನಿಶ್ಚಯಿಸಿ ನಿಶ್ಚಿತಾರ್ಥ ನೆರವೇರಿಸಿದ್ದರು. ವಿವಾಹದ ವಿಷಯ ತಿಳಿದ ಶ್ರೀಸೈಲ್ ಜಯಶ್ರೀ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕುಟುಂಬಸ್ಥರಿಗೆ ಆಕೆ ತನ್ನ ಜೊತೆಗಿರುವ ಫೋಟೋಗಳನ್ನು ಕಳುಹಿಸಿದ್ದಾನೆ. ಅವನ್ನು ನೋಡಿರುವ ಯುವಕನ ಕಡೆಯವರು ಏಪ್ರಿಲ್ 27ರಂದು ನಿಗದಿಯಾಗಿದ್ದ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಘಟನೆಯಿಂದ ನೊಂದ ಜಯಶ್ರೀ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

