ಬಾಗಲಕೋಟೆ: ಶಾಸಕ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆ ಅಂತ್ಯಗೊಂಡಿದೆ. ಈಗ ಎಲ್ಲರ ಕಣ್ಣು ಮೇ 4ರ ಫಲಿತಾಂಶದತ್ತ ನೆಟ್ಟಿದ್ದು, ಮತದಾನದ ಶೇಕಡಾವಾರು ಅಂಕಿ-ಅಂಶಗಳು ಅಭ್ಯರ್ಥಿಗಳಲ್ಲಿ ನಡುಕ ಹುಟ್ಟಿಸಿವೆ.
ಮತದಾನದ ಫೈನಲ್ ರಿಪೋರ್ಟ್:ಈ ಬಾರಿ ಕ್ಷೇತ್ರದಲ್ಲಿ ಶೇ. 68.74ರಷ್ಟು ಮತದಾನವಾಗಿದೆ. ಇದು 2023ರ ಸಾರ್ವತ್ರಿಕ ಚುನಾವಣೆಗಿಂತ (ಶೇ. 69.40) ಸ್ವಲ್ಪ ಕಡಿಮೆ ಇರುವುದು ವಿಶೇಷ.
ನಗರ vs ಗ್ರಾಮೀಣ: ಯಾರಿಗೆ ಲಾಭ?
ನಗರ ಭಾಗದಲ್ಲಿ ನೀರಸ ಪ್ರತಿಕ್ರಿಯೆ: ನಗರ ಪ್ರದೇಶದಲ್ಲಿ ಕೇವಲ ಶೇ. 61.24ರಷ್ಟು ಮತದಾನವಾಗಿದೆ. ಸಾಮಾನ್ಯವಾಗಿ ನಗರದಲ್ಲಿ ಮತದಾನ 70% ದಾಟಿದರೆ ಬಿಜೆಪಿಗೆ ಲಾಭ ಎಂಬ ಲೆಕ್ಕಾಚಾರವಿತ್ತು. ಆದರೆ ಮತದಾನ ಕುಸಿತವಾಗಿರುವುದು ಕೇಸರಿ ಪಡೆಯಲ್ಲಿ ಆತಂಕ ಮೂಡಿಸಿದೆ.
ಗ್ರಾಮೀಣ ಭಾಗದಲ್ಲಿ ಬಂಫರ್ ಮತದಾನ: ಗ್ರಾಮೀಣ ಭಾಗದಲ್ಲಿ ಬರೋಬ್ಬರಿ ಶೇ. 74.61ರಷ್ಟು ಭರ್ಜರಿ ವೋಟಿಂಗ್ ಆಗಿದೆ. ಮೊದಲಿನಿಂದಲೂ ಗ್ರಾಮೀಣ ಮತಗಳನ್ನೇ ನಂಬಿಕೊಂಡಿರುವ ಕಾಂಗ್ರೆಸ್ ಪಾಳಯದಲ್ಲಿ ಈ ಅಂಕಿ-ಅಂಶ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ.
ಕೈಕೊಟ್ಟವೇ ಗ್ಯಾರಂಟಿ ಯೋಜನೆಗಳು?
ಕಾಂಗ್ರೆಸ್ ಈ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಮತ್ತು ಗ್ಯಾರಂಟಿ ಯೋಜನೆಗಳನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಆದರೆ ಮತದಾನದ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದೆ.
ಫಲಿತಾಂಶದ ಕುತೂಹಲ:
ನಗರದ ವೋಟಿಂಗ್ ಟೆನ್ಷನ್ ಬಿಜೆಪಿಗೆ ಕಾಡುತ್ತಿದ್ದರೆ ಮಹಿಳೆಯರ ಮತದಾನದ ಇಳಿಕೆ ಕಾಂಗ್ರೆಸ್ಗೆ ಚಿಂತೆಯುಂಟು ಮಾಡಿದೆ. ಹಠಕ್ಕೆ ಬಿದ್ದವರಂತೆ ಉಭಯ ಪಕ್ಷಗಳು ಅಖಾಡಕ್ಕಿಳಿದಿದ್ದ ಬಾಗಲಕೋಟೆಯ ಈ ಕದನದಲ್ಲಿ ಮತದಾರ ಪ್ರಭು ಯಾರಿಗೆ ಹರಸಿದ್ದಾನೆ ಎಂಬುದು ಮೇ 4ರಂದು ತಿಳಿಯಲಿದೆ.

