ನಿನ್ನೆ ( ಏಪ್ರಿಲ್ 11 ) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 23 ರನ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆರಿಸಿಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಚೆನ್ನೂ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಶತಕ ಹಾಗೂ ಆಯುಷ್ ಮ್ಹಾತ್ರೆ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 213 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲ್ಔಟ್ ಆಯಿತು.
ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿ ಮ್ಯಾನ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಮೊದಲ ಮೂರು ಪಂದ್ಯಗಳಲ್ಲೂ ಮುಗ್ಗರಿಸಿದ್ದರು. ನಿನ್ನೆ ಶತಕ ಬಾರಿಸುವ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಮೂಲಕ ತಮ್ಮ ಹೊಸ ತಂಡ ಚೆನ್ನೈಗೆ ಮೊದಲ ಬಾರಿಗೆ ಆಸರೆಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ನಾಯಕ ರುತುರಾಜ್ ಗಾಯಕ್ವಾಡ್ ಬೇಗನೆ ವಿಕೆಟ್ ಒಪ್ಪಿಸಿದಾಗಿ ಯುವ ಆಟಗಾರ ಆಯುಷ್ ಮ್ಹಾತ್ರೆ ಜತೆಗೂಡಿ ಶತಕದ ಜತೆಯಾಟವನ್ನಾಡಿ ತಂಡವನ್ನು ಉತ್ತಮ ಹಂತಕ್ಕೆ ತಂದಿಟ್ಟ ಸಂಜು 56 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 115 ರನ್ ದಾಖಲಿಸಿದರು.
ಹೀಗೆ ಶತಕ ಬಾರಿಸಿದ ಸಂಜು ಸ್ಯಾಮ್ಸನ್ ಚೆಪಾಕ್ ಕ್ರೀಡಾಂಗಣದಲ್ಲಿ ಸಂಭ್ರಮಿಸಿ ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಖ್ಯಾತ ಚಿತ್ರ ಪಡಯಪ್ಪದ ಸ್ಟೈಲ್ ಮಾಡಿದರು. ಹೌದು, ಕೈನಲ್ಲಿ ಪಡಯಪ್ಪ ಶೈಲಿಯಲ್ಲಿ ಸೆಲ್ಯೂಟ್ ಮಾಡುತ್ತಾ ಐಪಿಎಲ್‌ನಲ್ಲಿ ತಮ್ಮ ಕಮ್‌ಬ್ಯಾಕ್ ಅನ್ನು ಆಚರಿಸಿದರು.
ಸಂಜು ಸ್ಯಾಮ್ಸನ್ ರಜನಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಇದನ್ನು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

