ಮಂಡ್ಯ: ರಾಜ್ಯ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ಪುನಾರಚನೆ ಮಾಅತು ಜೋರಾಗಿದೆ. ಸಚಿವ ಸ್ಥಾನದ ಮೇಲೆ ಕಣ್ಣಿರುವ ಕೆಲ ಶಾಸಕರು ಇಂದು ದೆಹಲಿಗೆ ಪ್ರಯಾಣಿಸುತ್ತಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮನವಿ ಮಾಡಲಿದ್ದಾರೆ.
ಈ ಬೆಳವಣಿಗೆಗಳ ಬಗ್ಗೆ ಶಾಸಕ ರವಿ ಕುಮಾರ್ ಗಣಿಗ ತಮ್ಮದೇ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟ ಪುನರ್‌ರಚನೆ ಕುರಿತು ಶಾಸಕ ರವಿಕುಮಾರ್ ಗಣಿಗ ಮಂಡ್ಯದಲ್ಲಿ ಮಾತನಾಡಿದ್ದು, ಹಲವು ಶಾಸಕರು ಸಚಿವರಾಗುವ ಆಸೆ ಹೊಂದಿದ್ದು, ಮೂರು-ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಸಹ ಮಂತ್ರಿಗಿರಿಗಾಗಿ ದೆಹಲಿಗೆ ತೆರಳುತ್ತಿದ್ದಾರೆ. ಅವರೆಲ್ಲರಿಗೂ ಸಚಿವ ಸ್ಥಾನ ಸಿಕ್ಕು ರಾಜ್ಯಕ್ಕೆ ಸೇವೆ ಸಲ್ಲಿಸಲಿ ಎಂದರು.
ಈ ಸಂಬಂಧ ತಾವು ಸೇರಿದಂತೆ 38 ಶಾಸಕರು ಪತ್ರ ಬರೆದಿದ್ದು, ಐದು ಮಂದಿ ಹೊಸಬರಿಗೆ ಮಂತ್ರಿಗಿರಿ ನೀಡುವಂತೆ ಕೋರಿದ್ದೇವೆ. ಹೊಸದಾಗಿ ಶಾಸಕರಾದವರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ತಮ್ಮ ಆಗ್ರಹದಲ್ಲಿ ಯಾವುದೇ ಬದಲಾವಣೆ ಇಲ್ಲ. ವೈಯಕ್ತಿಕವಾಗಿ ತನಗೆ ಸಚಿವ ಸ್ಥಾನ ಬೇಡ ಎಂದು ರವಿಕುಮಾರ್ ಗಣಿಗ ತಿಳಿಸಿದ್ದಾರೆ.
ಹಾಲಿ ಇರುವ ಕೆಲವು ಸಚಿವರು ಸಮರ್ಥವಾಗಿ ಕಾರ್ಯನಿರ್ವಹಿಸದಿರುವುದು ಮತ್ತು ಜನರಿಗೆ ಲಭ್ಯವಿಲ್ಲದಿರುವುದು ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ಇಂತಹ ಸಚಿವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡುವುದು ಉತ್ತಮ. ಹೀಗಿದ್ದರೂ ಈ ನಿರ್ಧಾರ ಮುಖ್ಯಮಂತ್ರಿಗಳು ಮತ್ತು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.

