HomeKarnatakaತುಮಕೂರು ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆ: ಸಾಂಸ್ಕೃತಿಕ ಪರಂಪರೆ, ಕಲೆ, ಸಾಹಿತ್ಯ, ರಂಗಭೂಮಿ, ಐತಿಹಾಸಿಕ ಹಿರಿಮೆ...

ತುಮಕೂರು ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆ: ಸಾಂಸ್ಕೃತಿಕ ಪರಂಪರೆ, ಕಲೆ, ಸಾಹಿತ್ಯ, ರಂಗಭೂಮಿ, ಐತಿಹಾಸಿಕ ಹಿರಿಮೆ ಪರಿಚಯ

ತುಮಕೂರಿನ ಸಾಂಸ್ಕೃತಿಕ ಪರಂಪರೆ, ಕಲೆ, ಸಾಹಿತ್ಯ, ರಂಗಭೂಮಿ ಹಾಗೂ ಐತಿಹಾಸಿಕ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅಕ್ಟೋಬರ್ 11ರಿಂದ ತುಮಕೂರು ದಸರಾ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಅಕ್ಟೋಬರ್ 21ರಂದು ಸಮಾರೋಪಗೊಳ್ಳಲಿದೆ.

ತುಮಕೂರಿನ ಪದವಿಪೂರ್ವ ಕಾಲೇಜು ಆವರಣದಲ್ಲಿ ದಸರಾ ಮಹೋತ್ಸವದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ  ಡಿಸಿಎಂ ಡಾ. ಜಿ. ಪರಮೇಶ್ವರ್ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ತುಮಕೂರು ದಸರಾವನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಕಲೆ, ಸಾಹಿತ್ಯ, ಕ್ರೀಡೆ ಮತ್ತು ರಂಗಭೂಮಿಯಲ್ಲಿ ತುಮಕೂರು ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ. ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಯುವಜನತೆಯಲ್ಲಿ ತಮ್ಮ ಜಿಲ್ಲೆಯ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇವಲ ಎರಡು ವರ್ಷಗಳಲ್ಲಿ ತುಮಕೂರು ದಸರಾ ಜನಪ್ರಿಯತೆ ಗಳಿಸಿದ್ದು, ಮೈಸೂರಿಗೆ ತೆರಳುವ ಬದಲು ತುಮಕೂರಿನಲ್ಲಿಯೇ ದಸರಾ ಆಚರಿಸುವ ಬಗ್ಗೆ ಜನರು ಮಾತನಾಡುವಂತಾಗಿದೆ. ಜನಪ್ರತಿನಿಧಿಗಳು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಉತ್ಸವ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಅಪರ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ದಸರಾ ಕೇವಲ ಸರ್ಕಾರಿ ಕಾರ್ಯಕ್ರಮವಾಗದೆ ಜನರ ಹಬ್ಬವಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಈ ಬಾರಿ ದಸರಾ ಆಚರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಬರದ ಸಂದರ್ಭದಲ್ಲಿಯೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮರೆಯಬಾರದು. ಇಂತಹ ಉತ್ಸವಗಳು ಜನರಲ್ಲಿ ಉತ್ಸಾಹ ಮೂಡಿಸುವುದರ ಜೊತೆಗೆ ಯುವಜನರಲ್ಲಿ ಸಾಂಸ್ಕೃತಿಕ ಆಸಕ್ತಿ ಬೆಳೆಸುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಅನಗತ್ಯ ವೆಚ್ಚಗಳಿಗೆ ಅವಕಾಶ ನೀಡದೆ, ಲಭ್ಯವಿರುವ ಸಂಪನ್ಮೂಲಗಳ ಇತಿಮಿತಿಯೊಳಗೆ ಅರ್ಥಪೂರ್ಣವಾಗಿ ದಸರಾ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ ಎಂದರು.

ಅಕ್ಟೋಬರ್ 11ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಚಾಲನೆ :

ಅಕ್ಟೋಬರ್ 11ರಂದು (ನಾಳೆ) ಬೆಳಗ್ಗೆ 8.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಪರಮಪೂಜ್ಯ ಸಿದ್ಧಗಂಗಾ ಶ್ರೀಗಳು, ಹನುಮಂತನಾಥ ಸ್ವಾಮೀಜಿಗಳು, ಸಿದ್ಧರಬೆಟ್ಟದ ಸ್ವಾಮೀಜಿಗಳು ಹಾಗೂ ಕಾರದ ವೀರಬಸವ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಾಧೀಶರನ್ನು ಆಹ್ವಾನಿಸಲಾಗಿದೆ. ಜಿಲ್ಲೆಯ ಶಾಸಕರು, ಸಂಸದರು ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಲ್ಲರೂ ಜೊತೆಯಾಗಿ ದಸರಾ ಉದ್ಘಾಟಿಸುತ್ತೇವೆ ಎಂದರು.

ಮಠಾಧೀಶರ ಸಾನ್ನಿಧ್ಯದಲ್ಲಿ ಜಿಲ್ಲೆಯ ದಸರಾ ಧ್ವಜ ಹಾಗೂ ಕನ್ನಡ ನಾಡಿನ ಧ್ವಜಾರೋಹಣ ನೆರವೇರಲಿದೆ. ನಂತರ ಚಾಮುಂಡೇಶ್ವರಿ ದೇವಿ, ದುರ್ಗಾದೇವಿ ಹಾಗೂ ಶಕ್ತಿದೇವತೆಯ ಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಮಧ್ಯಾಹ್ನದವರೆಗೆ ನಡೆಯಲಿವೆ. ಇದಕ್ಕಾಗಿ ತಾತ್ಕಾಲಿಕವಾಗಿ ನಿರ್ಮಿಸಿರುವ ಧಾರ್ಮಿಕ ಮಂಟಪವನ್ನು ದೇವಸ್ಥಾನದ ವಾತಾವರಣ ಮೂಡುವಂತೆ ಸಿದ್ಧಪಡಿಸಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳ ನಂತರ ವಿಶೇಷ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ವಿದ್ಯಾರ್ಥಿಗಳು, ಮಕ್ಕಳು ಹಾಗೂ ಯುವಜನರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಾಯೋಗಿಕ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಪಗ್ರಹಗಳು, ಅವುಗಳ ಕಾರ್ಯವಿಧಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಕುರಿತು ಪ್ರದರ್ಶನದ ಮೂಲಕ ಮಾಹಿತಿ ನೀಡಲಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆಯು ಹೆಲಿಕಾಪ್ಟರ್‌ಗಳ ರಚನೆ, ಕಾರ್ಯವಿಧಾನ ಹಾಗೂ ವೈಮಾನಿಕ ತಂತ್ರಜ್ಞಾನದ ಕುರಿತು ಪರಿಚಯಿಸಲಿದೆ. ಬೆಂಗಳೂರಿನ ಜೊತೆಗೆ ತುಮಕೂರು ಜಿಲ್ಲೆಯ ಗುಬ್ಬಿ ಸಮೀಪದ ನಿಟ್ಟೂರು ಭಾಗದಲ್ಲಿಯೂ ಎಚ್‌ಎಎಲ್ ಘಟಕ ಸ್ಥಾಪನೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ವಿವಿಧ ಸರ್ಕಾರಿ ಇಲಾಖೆಗಳೂ ತಮ್ಮ ಕಾರ್ಯಚಟುವಟಿಕೆಗಳ ಕುರಿತು ಪ್ರದರ್ಶನಗಳನ್ನು ಏರ್ಪಡಿಸಲಿವೆ.

ಫಲಪುಷ್ಪ ಪ್ರದರ್ಶನದಲ್ಲಿ ಐತಿಹಾಸಿಕ ಸ್ಮಾರಕಗಳ ಕಲಾಕೃತಿಗಳು :

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ವಿಶೇಷ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. ಹೂವುಗಳಿಂದ ಇಂಡಿಯಾ ಗೇಟ್, 1914ರಲ್ಲಿ ನಿರ್ಮಾಣಗೊಂಡ ತುಮಕೂರಿನ ಐತಿಹಾಸಿಕ ಟೌನ್‌ಹಾಲ್ ಹಾಗೂ ಹಂಪಿಯ ಕಲ್ಲಿನ ರಥದ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಆಶಯ ಹಾಗೂ ಜಿಲ್ಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪರಿಕಲ್ಪನೆಯನ್ನು ಪುಷ್ಪ ಕಲಾಕೃತಿಗಳ ಮೂಲಕ ಪ್ರದರ್ಶಿಸಲಾಗುವುದು. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಈಗಾಗಲೇ ಜಾಗ ಒದಗಿಸಲಾಗಿದೆ.

ಸಾರ್ವಜನಿಕರಿಗೆ ಹೆಲಿಕಾಪ್ಟರ್ ರೈಡ್ :

ಕಳೆದ ವರ್ಷದ ದಸರಾ ಮಹೋತ್ಸವದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದ ಹೆಲಿಕಾಪ್ಟರ್ ರೈಡ್ ಸೌಲಭ್ಯವನ್ನು ಈ ಬಾರಿಯೂ ಕಲ್ಪಿಸಲಾಗುತ್ತಿದೆ. ಅಕ್ಟೋಬರ್ 11ರಿಂದ ಹೆಲಿಕಾಪ್ಟರ್ ರೈಡ್ ಆರಂಭವಾಗಲಿದೆ.

ಸಾಮಾನ್ಯ ಜನರು, ವಿಶೇಷವಾಗಿ ಇಂತಹ ಅನುಭವ ಪಡೆಯಲು ಅವಕಾಶವಿಲ್ಲದವರು ಹೆಲಿಕಾಪ್ಟರ್ ಪ್ರಯಾಣದ ಅನುಭವ ಪಡೆಯಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮುಂದುವರಿಸಲಾಗುತ್ತಿದೆ.

ರಂಗ ದಸರಾಕ್ಕೆ ವಿಶೇಷ ಆದ್ಯತೆ :

ತುಮಕೂರು ಜಿಲ್ಲೆಯ ರಂಗಭೂಮಿ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ವರ್ಷವೂ ‘ರಂಗ ದಸರಾ’ ಆಯೋಜಿಸಲಾಗಿದೆ. ಗುಬ್ಬಿ ವೀರಣ್ಣ ಅವರ ಚೆನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಮೂಲಕ ಕನ್ನಡ ರಂಗಭೂಮಿಗೆ ಅಪಾರ ಕೊಡುಗೆ ದೊರೆತಿದೆ. ನಟಸಾರ್ವಭೌಮ ಡಾ. ರಾಜ್‌ಕುಮಾರ್ ಸೇರಿದಂತೆ ಅನೇಕ ಕಲಾವಿದರು ಈ ರಂಗಭೂಮಿ ಪರಂಪರೆಯ ಮೂಲಕ ಬೆಳಕಿಗೆ ಬಂದಿದ್ದಾರೆ.

ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಪ್ರತಿದಿನ ಎರಡು ನಾಟಕಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು :

ಅಕ್ಟೋಬರ್ 11ರಂದು ಸಂಜೆ ‘ಶಿವಲೀಲಾ’ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಇತಿಹಾಸವನ್ನು ಆಧರಿಸಿದ ಸುಮಾರು ಎರಡು ಗಂಟೆಗಳ ನಾಟಕ ಪ್ರದರ್ಶನ ನಡೆಯಲಿದೆ. ಸಂಜೆ 6ರಿಂದ 7 ಗಂಟೆಯ ಅವಧಿಯಲ್ಲಿ ಕಾರ್ಯಕ್ರಮ ಆರಂಭವಾಗುವ ನಿರೀಕ್ಷೆಯಿದೆ.

ಯುವಜನರಿಗಾಗಿ ರಾತ್ರಿ ಸುಮಾರು 8 ಗಂಟೆಗೆ ‘ಕ್ರಿಪ್ಟೋಸ್’ ಸಂಗೀತ ತಂಡದಿಂದ ಆಧುನಿಕ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 12ರಂದು ರಾತ್ರಿ 8 ಗಂಟೆಗೆ ‘ಟು ಐಡ್ ವಿಜಾರ್ಡ್’ ಬ್ಯಾಂಡ್‌ ತಂಡದ ಕಾರ್ಯಕ್ರಮ, ಅಕ್ಟೋಬರ್ 14ರಂದು ‘ಆಲ್‌ ಓಕೆ’ ತಂಡದ ಸಂಗೀತ ಕಾರ್ಯಕ್ರಮ ಹಾಗೂ ಅಕ್ಟೋಬರ್ 16ರಂದು ‘ಸೌತ್ ಮೀಲ್’ ಸಂಗೀತ ತಂಡದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮಕ್ಕಳ ದಸರಾ – ಪ್ರತಿಭೆಗಳ ಅನಾವರಣ:

ಅಕ್ಟೋಬರ್ 15ರಂದು ವಿಶೇಷವಾಗಿ ‘ಮಕ್ಕಳ ದಸರಾ’ ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿರುವ ಕಲೆ, ಸಾಹಿತ್ಯ, ಸೃಜನಶೀಲತೆ ಹಾಗೂ ವಿವಿಧ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಕ್ಕಳಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ದೊರೆತರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅವರ ಆಸಕ್ತಿ ಮತ್ತು ಪ್ರತಿಭೆಗಳನ್ನು ಬೆಳೆಸಲು ಮಕ್ಕಳ ದಸರಾ ಉತ್ತಮ ಅವಕಾಶವಾಗಲಿದೆ.

ಅಕ್ಟೋಬರ್ 17ರಂದು ಮಹಿಳಾ ಬೈಕ್ ರೈಡ್, ರಂಗೋಲಿ ಸ್ಪರ್ಧೆ ಮತ್ತು ಕವಿಗೋಷ್ಠಿ

ಅಕ್ಟೋಬರ್ 17ರಂದು ಮಹಿಳೆಯರಿಗಾಗಿ ವಿಶೇಷ ಬೈಕ್ ರೈಡ್ ಆಯೋಜಿಸಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಮಹಿಳೆಯರು, ತಾಯಂದಿರು ಹಾಗೂ ಸಹೋದರಿಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಳೆದ ವರ್ಷ ನಗರದ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರಂಗೋಲಿ ರಚಿಸಿ ಮಹಿಳೆಯರು ದಸರಾ ಸಂಭ್ರಮದಲ್ಲಿ ಭಾಗವಹಿಸಿದ್ದರು. ಈ ವರ್ಷವೂ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ ಹಿರಿಯ ಹಾಗೂ ಯುವ ಸಾಹಿತಿಗಳು, ಕವಿಗಳು ಮತ್ತು ಸಾಹಿತ್ಯಾಸಕ್ತರಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ವಿಶೇಷ ಕವಿಗೋಷ್ಠಿಯನ್ನೂ ಆಯೋಜಿಸಲಾಗಿದೆ. ತುಮಕೂರಿನ ಸಾಹಿತ್ಯ ಪರಂಪರೆಗೆ ಗೌರವ ಸಲ್ಲಿಸುವ ಪ್ರಮುಖ ಕಾರ್ಯಕ್ರಮಗಳಲ್ಲಿ ಇದೂ ಒಂದಾಗಿದೆ. ಸಂಜೆಗೆ ದಾಂಡೀಯ ನೃತ್ಯವನ್ನು ಏರ್ಪಾಟು ಮಾಡಲಾಗಿದೆ.

ಅಕ್ಟೋಬರ್ 18ರಂದು ಪಂಜಿನ ಕವಾಯತು ಇರಲಿದೆ. ಇಲ್ಲಿಯ ವಿಶೇಷತೆ ಏನೆಂದರೆ ಶಾಲಾ – ಕಾಲೇಜು ಮಕ್ಕಳಿಗೆ ಅವಕಾಶ ನೀಡುತ್ತಿದ್ದೇವೆ. ಒಂದು ತಿಂಗಳಿಂದ ತಯಾರು ನಡೆಯುತ್ತಿದೆ. ಆಮೇಲೆ ಎಂ.ಜಿ.ಸ್ಟೇಡಿಯಂನಲ್ಲಿ ʼಸೌತ್‌ ಗರಾಜ್‌ʼ ಬ್ಯಾಂಡ್‌ ಇರಲಿದೆ. ಪೂಜಾ ರಂಜಿತ್‌ ತಂಡದಿಂದ ಡ್ಯಾನ್ಸ್‌ ಇರಲಿದೆ. ಕಾರು ರ್ಯಾಲಿಯನ್ನು ಕೂಡ ಆಯೋಜಿಸಿದ್ದೇವೆ.

ಅಕ್ಟೋಬರ್ 19ರಂದು ನಟಿ ರಚಿತಾ ರಾಮ್‌ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅವತ್ತು ರ‍್ಯಾಪರ್ ಚಂದನ್‌ ಶೆಟ್ಟಿ ಅವರು ಆಗಮಿಸಲಿದ್ದು, ಅವರದ್ದು ಕೂಡ ಎರಡು ಗಂಟೆಗಳ ಕಾರ್ಯಕ್ರಮವಿರುತ್ತದೆ.

ಅಕ್ಟೋಬರ್‌ 20ರಂದು ಬೆಳಗ್ಗೆ ಕುಸ್ತಿ ಏರ್ಪಾಟು ಮಾಡಿದ್ದೇವೆ. ಆಮೇಲೆ ದಸರಾ ಕ್ರೀಡಾಕೂಟ ನಡೆಯಲಿದೆ. ಸಂಜೆ ರಮೇಶ್‌ ಅರವಿಂದ್‌ ಬರುತ್ತಾರೆ. ಸಂಚಿತ್‌ ಹೆಗ್ಡೆ ಅವರಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಪ್ರಭಾತ್‌ ಕಲಾವಿದರಿಂದ ʼಕನ್ನಡದ ಗತವೈಭವʼ ಡ್ರಾಮಾ ಇರಲಿದೆ. ತುಮಕೂರು ಗತವೈಭವವೂ ಸೇರಿದೆ.

ಅಕ್ಟೋಬರ್‌ 21ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಟೌನ್‌ಹಾಲ್‌ ಸರ್ಕಲ್‌ನಲ್ಲಿ ತಾಯಿ ಚಾಮುಂಡೇಶ್ವರಿಗೆ ಹೂವು ಹಾಕುವ ಮೂಲಕ ಮೆರವಣಿಗೆ ಪ್ರಾರಂಭ ಮಾಡುತ್ತೇವೆ. ಈ ಬಾರಿ 3 ಆನೆಗಳು ಇರುತ್ತವೆ. 70 ಗ್ರಾಮ ದೇವತೆಗಳು ಇರುತ್ತವೆ. ಪೊಲೀಸರು, 33 ಕಲಾತಂಡದವರು, ಜನಸಮುದಾಯ ಭಾಗವಹಿಸುತ್ತಾರೆ. ಮೆರವಣಿಗೆ ನಂತರ ಶಮಿ ಪೂಜೆ ಇರಲಿದೆ. ಅದಾಗಿ ಸಂಜೆ ಹರಿಕೃಷ್ಣ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಜೊತೆಗೆ ಹತ್ತು ದಿನವೂ ದೇವತೆಗಳಿಗೆ ಪೂಜೆ ಇರಲಿದೆ. ಆಹಾರ ಮೇಳವು ಇರಲಿದೆ.

ಅಮಾನಿಕೆರೆಯಲ್ಲಿ ಶಾಶ್ವತ ಸಂಗೀತ ಕಾರಂಜಿ:

ತುಮಕೂರಿನ ಅಮಾನಿಕೆರೆಯಲ್ಲಿ ಸಾರ್ವಜನಿಕರ ಮನರಂಜನೆಗಾಗಿ ಶಾಶ್ವತ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ. ಇದು ದಸರಾ ಉತ್ಸವದ ಹತ್ತು ದಿನಗಳಿಗೆ ಮಾತ್ರ ಸೀಮಿತವಾಗದೆ, ವಾರಾಂತ್ಯದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ವೀಕ್ಷಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ನಗರದ ಜನರು ಕುಟುಂಬ ಮತ್ತು ಮಕ್ಕಳೊಂದಿಗೆ ಸಂಜೆ ವೇಳೆ ಸಮಯ ಕಳೆಯಲು ಹಾಗೂ ಮನರಂಜನೆ ಪಡೆಯಲು ಇದೊಂದು ಉತ್ತಮ ಸ್ಥಳವಾಗಲಿದೆ.

ನಗರ ದರ್ಶನಕ್ಕೆ ಎರಡು ಉಚಿತ ಅಂಬಾರಿ ಬಸ್‌ ಗಳು:

ದಸರಾ ಹಿನ್ನೆಲೆಯಲ್ಲಿ ತುಮಕೂರು ನಗರದ ಪ್ರಮುಖ ರಸ್ತೆಗಳು ಮತ್ತು ಸ್ಥಳಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಸಾರ್ವಜನಿಕರಿಗೆ ನಗರದ ದೀಪಾಲಂಕಾರವನ್ನು ವೀಕ್ಷಿಸಲು ಕಳೆದ ವರ್ಷ ಒಂದು ಉಚಿತ ಅಂಬಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಅಂಬಾರಿ ಬಸ್‌ ಗಳನ್ನು ಒದಗಿಸಲಾಗುತ್ತಿದ್ದು, ಪ್ರತಿದಿನ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿವೆ. ಸಾರ್ವಜನಿಕರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಿ ದಸರಾ ದೀಪಾಲಂಕಾರವನ್ನು ವೀಕ್ಷಿಸಬಹುದು.

ಅಮಾನಿಕೆರೆಯ ಸಂಗೀತ ಕಾರಂಜಿ, ಅಂಬಾರಿ ಬಸ್ ಸಂಚಾರ ಹಾಗೂ ನಗರದ ದೀಪಾಲಂಕಾರದ ಉದ್ಘಾಟನೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಕೆಲಸವನ್ನು ಇಂದು ರಾತ್ರಿಯೇ ನಡೆಸಲು ಉದ್ದೇಶಿಸಲಾಗಿದೆ. ಅಕ್ಟೋಬರ್ 11ರಂದು ಮೈಸೂರಿನಲ್ಲಿ ನಡೆಯುವ ದಸರಾ ಕಾರ್ಯಕ್ರಮ ಹಾಗೂ ದಸರಾ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಭಾಗವಹಿಸಬೇಕಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ದಸರಾ ಮಹೋತ್ಸವವು ತುಮಕೂರು ಜಿಲ್ಲೆಯ ಜನರಲ್ಲಿ ಹೊಸ ಉತ್ಸಾಹ, ಸಾಂಸ್ಕೃತಿಕ ಅಭಿಮಾನ ಹಾಗೂ ಒಗ್ಗಟ್ಟನ್ನು ಮೂಡಿಸಲಿ. ಜಿಲ್ಲೆಯ ಸಮಸ್ತ ಜನತೆಗೆ ತುಮಕೂರು ದಸರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು. ಎಲ್ಲರೂ ಕೂಡ ದಸರಾ ಮಹೋತ್ಸವದಲ್ಲಿ ಭಾಗವಹಿಸಬೇಕು ಎಂದು ವಿನಂತಿ ಮಾಡುತ್ತೇನೆ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular