ಬೆಂಗಳೂರು : ಬೆಂಗಳೂರಿನ ಹೆಬ್ಬಾಳದಲ್ಲಿ 2ನೇ ಪಿಯುಸಿ ವಿದ್ಯಾರ್ಥಿನಿ ತನುಶ್ರೀ (18) ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಫಲಿತಾಂಶದ ಬೆನ್ನಲ್ಲೇ ನಡೆದ ಈ ಸಾವನ್ನು ಆರಂಭದಲ್ಲಿ ಆತ್ಮಹತ್ಯೆ ಎಂದು ಶಂಕಿಸಲಾಗಿತ್ತಾದರೂ, ಮೃತಳ ಸಂಬಂಧಿಕರು ತಾಯಿಯ ವಿರುದ್ಧವೇ ಕೊಲೆ ಆರೋಪ ಹೊರಿಸಿದ್ದಾರೆ. ಬಾಲಕಿಯ ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿರುವುದು ಸಂಶಯವನ್ನು ಮತ್ತಷ್ಟು ಬಲಪಡಿಸಿದ್ದು, ಹೆಬ್ಬಾಳ ಪೊಲೀಸರು ತಾಯಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಹೌದು. ಬೆಂಗಳೂರಿನ ಹೆಬ್ಬಾಳದ ಗುಂಗೇನಹಳ್ಳಿಯಲ್ಲಿ 18 ವರ್ಷದ ತನುಶ್ರೀ ಎಂಬ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ದಿನವೇ ಈ ಘಟನೆ ನಡೆದಿದೆ. ತನುಶ್ರೀ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು ಎನ್ನಲಾಗಿದೆ. ಆರಂಭದಲ್ಲಿ ಇದೊಂದು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಆದರೆ, ಬಾಲಕಿಯ ತಂದೆ ಸಂಬಂಧಿಕರು ತಾಯಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ತನುಶ್ರೀ ತಂದೆ 2 ವರ್ಷದ ಹಿಂದೆ ಮೃತಪಟ್ಟಿದ್ದರು. ತನುಶ್ರೀ ತನ್ನ ತಾಯಿಯೊಂದಿಗೆ ವಾಸವಾಗಿದ್ದಳು.ಮಗಳ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಬಂದ ತಂದೆ ಸಂಬಂಧಿಕರು, ಇದೊಂದು ಆತ್ಮಹತ್ಯೆಯಲ್ಲ, ಇದರಲ್ಲಿ ತಾಯಿಯ ಪಾತ್ರವಿದೆ ಎಂದು ಆರೋಪಿಸಿದ್ದಾರೆ. ಬಾಲಕಿಯ ದೇಹದ ಮೇಲೆ ಗಾಯದ ಗುರುತುಗಳಿವೆಯೆಂದು ಸಂಬಂಧಿಕರು ದೂರಿದ್ದಾರೆ.ಫಲಿತಾಂಶ ಬಂದ ನಂತರ ತಾಯಿ ಮತ್ತು ಮಗಳ ನಡುವೆ ಜಗಳ ನಡೆದಿರಬಹುದು ಅಥವಾ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆಯ ನಾಟಕವಾಡಲಾಗುತ್ತಿದೆ ಎಂಬುದು ತಂದೆಯ ಕಡೆಯವರ ಗಂಭೀರ ಆರೋಪವಾಗಿದೆ.
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಾಲಕಿಯ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಯ ನಂತರವಷ್ಟೇ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಸತ್ಯಾಂಶ ಹೊರಬರಬೇಕಿದೆ.

