ನವದೆಹಲಿ: ಮುಂಬರುವ ಮುಂಗಾರು ಋತುವನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ.
ಫಾಸ್ಫೇಟಿಕ್ ಮತ್ತು ಪೊಟ್ಯಾಷಿಕ್ (P&K) ಗೊಬ್ಬರಗಳ ಮೇಲೆ 41,534 ಕೋಟಿ ರೂ.ಗಳ ಸಬ್ಸಿಡಿಯನ್ನು ವಿನಿಯೋಗಿಸಲು ಹಾಗೂ ಮೂರು ನಿರ್ದಿಷ್ಟ ಗೊಬ್ಬರಗಳ ಸಬ್ಸಿಡಿ ದರವನ್ನು ಹೆಚ್ಚಿಸಲು ಸರ್ಕಾರ ಅನುಮೋದನೆ ನೀಡಿದೆ. ಈ ನೂತನ ದರಗಳು 2024ರ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಅನ್ವಯವಾಗಲಿವೆ. ಈ ಬಾರಿ ಕೇಂದ್ರ ಸರ್ಕಾರವು ನೈಟ್ರೋಜನ್, ಫಾಸ್ಫರಸ್ ಮತ್ತು ಸಲ್ಫರ್ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಿದೆ. ಕಳೆದ ಮುಂಗಾರು ಹಂಗಾಮಿಗೆ ಹೋಲಿಸಿದರೆ P&K ರಸಗೊಬ್ಬರಗಳ ಮೇಲಿನ ಒಟ್ಟಾರೆ ಸಬ್ಸಿಡಿ ಶೇ. 12 ರಷ್ಟು ಹೆಚ್ಚಳವಾಗಿದೆ.
ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಸಬ್ಸಿಡಿ ದರಗಳು ಈ ಕೆಳಗಿನಂತಿವೆ (ಪ್ರತಿ ಕೆ.ಜಿ.ಗೆ):
- ನೈಟ್ರೋಜನ್: 47.32 ರೂ. (ಹಿಂದಿನ ದರ 43.02 ರೂ.)
- ಫಾಸ್ಫರಸ್: 52.76 ರೂ. (ಹಿಂದಿನ ದರ 47.96 ರೂ.)
- ಸಲ್ಫರ್: 3.16 ರೂ. (ಹಿಂದಿನ ದರ 2.87 ರೂ.)
ಪೊಟ್ಯಾಷ್ ರಸಗೊಬ್ಬರದ ಮೇಲಿನ ಸಬ್ಸಿಡಿ ದರವನ್ನು ಪ್ರತಿ ಕೆ.ಜಿ.ಗೆ 2.38 ರೂ.ಗಳಂತೆ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಮುಂಗಾರು ಹಂಗಾಮಿನ ಆರಂಭದೊಂದಿಗೆ ಖಾರಿಫ್ ಬೆಳೆಗಳ ಬಿತ್ತನೆ ಕಾರ್ಯವು ಶುರುವಾಗಲಿದ್ದು, ಸರ್ಕಾರದ ಈ ನಿರ್ಧಾರವು ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

