ಕರ್ನಾಟಕದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು (ಏಪ್ರಿಲ್ 9) ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಗಳಿಗಾಗಿ ಇಂದು ಬಿಗ್ ಫೈಟ್ ನಡೆಯುತ್ತಿದೆ.
ಪ್ರತಿಷ್ಠೆಯ ಕಣ: ಆಡಳಿತಾರೂಢ ಕಾಂಗ್ರೆಸ್‌ಗೆ ಈ ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾದರೆ, ಬಿಜೆಪಿ ಈ ಬಾರಿ ಕೈ ಕೋಟೆಗೆ ಲಗ್ಗೆ ಇಡಲು ಭರ್ಜರಿ ತಂತ್ರ ರೂಪಿಸಿದೆ.
ಅಭ್ಯರ್ಥಿಗಳ ವಿವರ:
ದಾವಣಗೆರೆ ದಕ್ಷಿಣ: ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ (ಕಾಂಗ್ರೆಸ್) vs ಶ್ರೀನಿವಾಸ್ ಟಿ. ದಾಸಕರಿಯಪ್ಪ (ಬಿಜೆಪಿ).
ಬಾಗಲಕೋಟೆ: ಉಮೇಶ್ ಮೇಟಿ (ಕಾಂಗ್ರೆಸ್) vs ವೀರಣ್ಣ ಚರಂತಿಮಠ (ಬಿಜೆಪಿ).
ಮತದಾನ ವಿವರ – ಬಾಗಲಕೋಟೆ – ದಾವಣಗೆರೆ ದಕ್ಷಿಣ
ಮತಗಟ್ಟೆಗಳ ಸಂಖ್ಯೆ – 322 – 284
ಸಿಬ್ಬಂದಿ – 2500 – 1,489
ಕಣದಲ್ಲಿರುವ ಅಭ್ಯರ್ಥಿಗಳು – 9 – 25
ಒಟ್ಟು ಮತದಾರರು – 2,59,797 – 2,31,072
ಪುರುಷರು – 1,26,999 – 1,13,399
ಮಹಿಳೆಯರು – 1,32,775 – 1,17,690
ಬಿಸಿಲ ಬೇಗೆಯಲ್ಲೂ ಮತದಾನಕ್ಕೆ ಸಕಲ ಸಿದ್ಧತೆ
ಬೇಸಿಗೆಯ ಸುಡು ಬಿಸಿಲಿರುವುದರಿಂದ ಮತದಾರರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ವಿಶೇಷ ಮುನ್ನೆಚ್ಚರಿಕೆಗಳನ್ನು ವಹಿಸಿದೆ:
ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ.
ಪ್ರತಿಯೊಂದು ಮತಗಟ್ಟೆಯಲ್ಲಿ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿದೆ.
ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗಾಗಿ ಉಚಿತ ವಾಹನ ಸೌಲಭ್ಯ ಒದಗಿಸಲಾಗಿದೆ.
ಪ್ರಚಾರದ ಅಬ್ಬರ ಹೇಗಿತ್ತು?
ಈ ಚುನಾವಣೆಗಾಗಿ ರಾಜ್ಯದ ಘಟಾನುಘಟಿ ನಾಯಕರು ಬೀದಿಗಿಳಿದು ಪ್ರಚಾರ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಬಾಗಲಕೋಟೆಯಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ದಾವಣಗೆರೆಯಲ್ಲಿ ಮತ ಬೇಟೆ ನಡೆಸಿದ್ದಾರೆ.
ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ ಅವರು ರೋಡ್ ಶೋ ಮೂಲಕ ಅಬ್ಬರಿಸಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಚಾರ ವಿಶೇಷ ಗಮನ ಸೆಳೆದಿತ್ತು.

