ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಕೊಳೆತ ವಸ್ತುಗಳು ಹಾಗೂ ಅಶ್ಲೀಲ ಚಿತ್ರಗಳಿದ್ದ ಪಾರ್ಸೆಲ್ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಭಾರತೀಯ ಮೂಲದ ಡಚ್ ಪ್ರಜೆಯನ್ನು ಕೆಐಎ (KIA) ಪೊಲೀಸರು ಬಂಧಿಸಿದ್ದಾರೆ.
ಹೌದು. ವ್ಯಕ್ತಿಯೊಬ್ಬ ವಿಮಾನ ನಿಲ್ದಾಣ ಆಡಳಿತ ಕಚೇರಿಯ ವಿಳಾಸಕ್ಕೆ ಕಾಟನ್ ಬಾಕ್ಸ್ ಒಂದನ್ನು ಪಾರ್ಸೆಲ್ ಕಳುಹಿಸಿ ಅದರಲ್ಲಿ ಕೊಳೆತ ಟೊಮೆಟೊ, , ಟೂತ್ ಪೇಸ್ಟ್ ಕವರ್, ಮಹಿಳೆ ಹಾಗೂ ಪುರುಷರ ಬೆತ್ತಲೆ ಫೋಟೋ, ಕೊಳೆತ ಹೂವಿನ ಹಾರ ಇಟ್ಟು ಕಳುಹಿಸಿದ್ದ. ಮಾನ ನಿಲ್ದಾಣ ಸಿಬ್ಬಂದಿ ಮಂಜುನಾಥ್ ಎಂಬುವವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ.
·ಏನಿದು ವಿಚಿತ್ರ ಘಟನೆ?: ವಿಮಾನ ನಿಲ್ದಾಣದ ಆಡಳಿತ ಕಚೇರಿಗೆ ಕಳೆದ ಕೆಲವು ದಿನಗಳಿಂದ ನಿಗೂಢ ಪಾರ್ಸೆಲ್‌ವೊಂದು ಬರುತ್ತಿತ್ತು. ಅದನ್ನು ಬಿಚ್ಚಿ ನೋಡಿದ ಅಧಿಕಾರಿಗಳಿಗೆ ಶಾಕ್ ಕಾದಿತ್ತು!
·ಬಾಕ್ಸ್‌ನಲ್ಲಿ ಏನಿತ್ತು?: ಆರೋಪಿ ಕಳುಹಿಸುತ್ತಿದ್ದ ಕಾಟನ್ ಬಾಕ್ಸ್‌ನಲ್ಲಿ ಕೊಳೆತು ನಾರುತ್ತಿದ್ದ ಟೊಮೆಟೊಗಳು, ಬಾಡಿದ ಹೂವಿನ ಹಾರಗಳು, ಕಬ್ಬಿಣದ ತುಂಡುಗಳು, ಹಳೆಯ ಟೂತ್ ಪೇಸ್ಟ್ ಕವರ್‌ಗಳು ಹಾಗೂ ಅತ್ಯಂತ ಅಸಹ್ಯಕರವಾದ ಅಶ್ಲೀಲ ಭಾವಚಿತ್ರಗಳಿದ್ದವು.
·ಯಾರು ಈ ಕಿರಾತಕ?: ಬಂಧಿತ ವ್ಯಕ್ತಿಯನ್ನು 65 ವರ್ಷದ ಸುಭಾಶ್ ಜೈ ಅಜೀಜ್ ಎಂದು ಗುರುತಿಸಲಾಗಿದೆ. ಈತ ಮೂಲತಃ ಭಾರತದವನಾಗಿದ್ದರೂ, ಸದ್ಯ ನೆದರ್ಲ್ಯಾಂಡ್ಸ್ (ಡಚ್) ಪೌರತ್ವ ಹೊಂದಿದ್ದಾನೆ.
·ಸಿಕ್ಕಿಬಿದ್ದಿದ್ದು ಹೇಗೆ?: ವಿಮಾನ ನಿಲ್ದಾಣದ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಗಮನಿಸಿದ ಸಿಬ್ಬಂದಿ ಮಂಜುನಾಥ್ ಎಂಬುವವರು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಈತನ ಕಿಡಿಗೇಡಿತನವನ್ನು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ.
·ಮಾನಸಿಕ ಸ್ಥಿತಿ: ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯ ಮಾನಸಿಕ ಆರೋಗ್ಯ ಸ್ಥಿಮಿತದಲ್ಲಿಲ್ಲ ಎಂಬ ವಿಷಯ ತಿಳಿದುಬಂದಿದೆ. ಅಧಿಕಾರಿಗಳಿಗೆ ಸುಖಾಸುಮ್ಮನೆ ಕಿರುಕುಳ ನೀಡುವುದೇ ಈತನ ಉದ್ದೇಶವಾಗಿತ್ತು.

