ಹಾಸನ: ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪೊಲೀಸರ ಅನುಮತಿ ಇಲ್ಲದೇ ಡಿಜೆ ಸಾಂಗ್ ಹಾಕಿದ್ದಕ್ಕೆ 15 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ವೇಳೆ ಹಾಸನದಲ್ಲಿ ಅನುಮತಿ ನೀಡದಿದ್ದರು ಡಿಜೆ ಬಳಸಿದ ಕಾರಣ 15 ಜನರ ಮೇಲೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿರುವ ಪೊಲೀಸರ ವಿರುದ್ಧ ವಿಹೆಚ್ಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಹಾಸನದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಮಹಿಪಾಲ್, ಸುಪ್ರೀಂ ಕೋರ್ಟ್ ಗೈಡ್ಲೈನ್ಸ್ ನಾವು ಕೂಡ ನೋಡಿದ್ದೇವೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಗಳ ಕಾರ್ಯಕ್ರಮಗಳು ನಡೆದಾಗ ಅಲ್ಲಿಗೆ ಪರಿಸರ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಡೆಸಿಬಲ್ ಚೆಕ್ ಮಾಡಿಸುವ ತಾಕತ್ ಅನ್ನು ಪೊಲೀಸರು ಪ್ರದರ್ಶಿಸಬೇಕು. ಅಲ್ಲಿ ಎಫ್ಐಆರ್ ದಾಖಲು ಮಾಡ್ತಾರಾ? ಐಪಿಎಲ್ ಆಯೋಜಕರು 124 ಡೆಸಿಬಲ್ ರೀಚ್ ಆಯ್ತು ಅಂಥ ಆಯೋಜಕರು ತೋರಿಸುತ್ತಾರೆ. ಅವರ ಮೇಲೆ ಕೇಸ್ ದಾಖಲು ಮಾಡ್ತಾರಾ ಎಂದು ಪ್ರಶ್ನಿಸಿದರು.
ಬೇರೆ ಬೇರೆ ಪ್ರಾರ್ಥನಾಲಯದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಕಾನೂನು ಮೀರಿ ಅನೌನ್ಸ್ ಮಾಡುತ್ತಾರೆ. ಇದರ ಬಗ್ಗೆ ಪೊಲೀಸ್ ಇಲಾಖೆ ತಲೆ ಕೆಡಿಸಿಕೊಂಡಿಲ್ಲ. ಅನಧಿಕೃತ ಫ್ಲೆಕ್ಸ್ಗಳ ಹಾವಳಿ ನಗರದಲ್ಲಿ ಹೆಚ್ಚಾಗಿದೆ ಆದರೂ ಏಕೆ ಕ್ರಮ ಕೈಗೊಂಡಿಲ್ಲ? ಎಂಟು ತಿಂಗಳ ಹಿಂದೆ ಅನ್ಯಧರ್ಮಿಯರ ಹಬ್ಬದ ದಿನ ರಾತ್ರಿ ಒಂದು ಗಂಟೆಯಲ್ಲಿ ಕೆ.ಆರ್.ಪುರಂನಲ್ಲಿ ಜೋರಾಗಿ ಲೌಡ್ ಸ್ಪೀಕರ್ ಹಾಕಿದ್ದರು. ಎಲ್ಲಾ ಇಲಾಖೆಯ ಪ್ರಮುಖ ಅಧಿಕಾರಿಗಳಿಗೆ ಫೋನ್ ಮಾಡಿದ್ದೆ. ಸಾಮರಸ್ಯ ದೃಷ್ಟಿಯಿಂದ ಅನುಸರಿಸಿಕೊಳ್ಳಿ. ಹಾಸನ ಜಿಲ್ಲೆಯ ಸಾಮರಸ್ಯ ದೃಷ್ಟಿಯಿಂದ ಇದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ಈಗ ಅಧಿಕಾರಿಗಳಿಗೆ ಸಾಮರಸ್ಯ ನೆನಪಾಗುತ್ತಿಲ್ವಾ? ಸತ್ತು ಹೋಗಿದೆಯಾ ಎಂದು ಪೊಲೀಸರ ವಿರುದ್ಧ ಕಿಡಿಕಾರಿದರು. ಈಗ ಪೊಲಿಸರು 15 ಜನರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

