ಬೆಂಗಳೂರು: ಯಾವುದೇ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಿದ ನಂತರ ಸ್ಥಳ ನಿಯುಕ್ತಿಗಾಗಿ ಕಾಯುವಂತೆ ಮಾಡದೆ ಕಡ್ಡಾಯವಾಗಿ ಹುದ್ದೆ ನೀಡಬೇಕು ಎಂದು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದ್ದಾರೆ.
ಈ ಕುರಿತಾಗಿ ಅವರು ಸುತ್ತೋಲೆ ಹೊರಡಿಸಿದ್ದು, ಸೂಚನೆಯನ್ನು ಉಲ್ಲಂಘಿಸಿ ಸ್ಥಳ ನಿಯುಕ್ತಿ ಮಾಡದೆ ಕಡ್ಡಾಯ ನಿರೀಕ್ಷಣೆಯಲ್ಲಿ ಇರಿಸಿದರೆ ಇತ್ತೀಚೆಗೆ ಹೈಕೋರ್ಟ್ ನೀಡಿದ ನಿರ್ದೇಶನದಂತೆ ಅಂತಹ ಅಧಿಕಾರಿ, ನೌಕರರಿಗೆ ನಿರೀಕ್ಷಣೆಯ ಅವಧಿಗೆ ಪಾವತಿಸಿದ ವೇತನ ಮತ್ತು ಭತ್ಯೆಯನ್ನು ಸಂಬಂಧಿತ ಸಕ್ಷಮ ಪ್ರಾಧಿಕಾರಗಳಿಂದ ವಸೂಲಿ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ಸ್ಥಳ ನಿಯುಕ್ತಿ ಮಾಡದೆ ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಅವಕಾರಿ ಉಪ ಆಯುಕ್ತ ಕೆ. ಅರುಣ್ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಯಾವುದೇ ನೌಕರರನ್ನು ಸ್ಥಳ ನಿಯುಕ್ತಿ ಮಾಡದೆ ವರ್ಗಾವಣೆ ಮಾಡುವಂತಿಲ್ಲ. ಸ್ಥಳ ನಿಯುಕ್ತಿ ನೀಡದೆ ವರ್ಗಾವಣೆ ಮಾಡಿ ಕಡ್ಡಾಯ ನಿರೀಕ್ಷಣೆಯಲ್ಲಿ ಇರಿಸಿದರೆ ಆ ಅವಧಿಗೆ ಪಾವತಿಸಿದ ವೇತನ ಮತ್ತು ಭತ್ಯೆಯನ್ನು ಸಂಬಂಧಿತ ಸಕ್ಷಮ ಪ್ರಾಧಿಕಾರಗಳಿಂದ ವಸೂಲಿ ಮಾಡುವಂತೆ ತೀರ್ಪು ನೀಡಿತ್ತು.
ಶಾಲಿನಿ ರಜನಿಶ್ ಅವರು ಇದನ್ನು ಉಲ್ಲೇಖಿಸಿ, ಯಾವುದೇ ಸರ್ಕಾರಿ ನೌಕರರ ವರ್ಗಾವಣೆಯ ಸಂದರ್ಭದಲ್ಲಿ ಸ್ಥಳ ನಿಯುಕ್ತಿಗಾಗಿ ಕಾಯುವಂತೆ ಮಾಡದೇ ತಕ್ಷಣವೇ ಕಡ್ಡಾಯವಾಗಿ ಸ್ಥಳ ನಿಯುಕ್ತಿ ಹುದ್ದೆ ನೀಡಬೇಕೆಂದು ಸೂಚಿಸಿದ್ದಾರೆ.

