ಕೊಪ್ಪಳ: ಕೊಪ್ಪಳ ಜಿಲ್ಲೆ ಹನುಮಸಾಗರ ಮಾವಿನಇಟಗಿ ಗ್ರಾಮದ ಸೋಮಶಂಕರಲಿಂಗೇಶ್ವರ ದೇವಸ್ಥಾನದ ನಿಧಿ ದೋಚಿದ್ದ ವ್ಯಕ್ತಿ ಪಾಪಪ್ರಜ್ಞೆಯಿಂದ ಭಾನುವಾರ ಪೊಲೀಸರಿಗೆ ಶರಣಾಗಿದ್ದಾನೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಾವಿನ ಇಟಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಇಳಕಲ್ ನಿವಾಸಿ ಮೌಲಾಸಾಬ್ ಕಾಸಿಂಸಾಬ್ ಮುಜಾವರ(45) ಪೊಲೀಸ್ ಠಾಣೆಗೆ ಶರಣಾದ ಕಳ್ಳ. ಪಂಕ್ಚರ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಮೌಲಾಸಾಬ್ ದೇವಸ್ಥಾನ ಆವರಣದಲ್ಲಿ ಎರಡು ವರ್ಷಗಳ ಹಿಂದೆ ನಾಳ್ವರೊಂದಿಗೆ ನಿಧಿ ದೋಚಿದ್ದ.
ನಾನು ಸೇರಿದಂತೆ ನಾಲ್ವರು ದೇವಸ್ಥಾನದ ನಿಧಿ ತೆಗೆದಿದ್ದು, ನೂರು ಬಂಗಾರದ ನಾಣ್ಯ ಮತ್ತು ಒಂದು ಬೆಳ್ಳಿ ಕಡಗ ಸಿಕ್ಕಿದೆ. ನಿಧಿ ಸಿಕ್ಕ ನಂತರ ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳಾಗಿದ್ದು, ಕುಟುಂಬದಲ್ಲಿ ಅಶಾಂತಿ, ವೈಯಕ್ತಿಕ ಕಷ್ಟ, ಆರೋಗ್ಯ ಸಮಸ್ಯೆ ತಲೆದೂರಿದೆ. ಈ ಘಟನೆಯ ನಂತರ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಇದು ದೇವರ ಶಾಪ ಎನ್ನುವ ಭಯ ಕಾಡುತ್ತಿದೆ ಎಂದು ಶರಣಾದ ಮೌಲಾಸಾಬ್ ಹೇಳಿಕೊಂಡಿದ್ದಾನೆ.
ಆತನಿಗೆ ಜೊತೆಗಾರರು ನಿಧಿಯಲ್ಲಿ ಪಾಲು ನೀಡಿಲ್ಲ, ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತಾಗಿ ಮೌಲಾಸಾಬ್ ದೇವಾಲಯ ಕಮಿಟಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆತನ ವಿಚಾರಣೆ ನಡೆಸಿ ಉಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
(ಚಿತ್ರಕೃಪೆ: ಎಐ)

