ತುಮಕೂರು: ಕೊಪ್ಪಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದ್ದು, ಚಿಕಿತ್ಸೆ ನಂತರ ಗುಣಮುಖರಾದ ಅವರು ಬೆಂಗಳೂರಿಗೆ ತೆರಳಿದ್ದಾರೆ.
ಭಾನುವಾರ ರಾತ್ರಿ 10 ಗಂಟೆ ಸುಮಾರು ಮಾರ್ಗ ಮಧ್ಯೆ ಸಚಿವ ತಂಗಡಗಿಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಚಿಕಿತ್ಸೆ ಬಳಿಕ ಬೆಂಗಳೂರಿಗೆ ತೆರಳುವ ವೇಳೆ ಸಚಿವರು ಮಾತನಾಡಿ, ಪ್ರಯಾಣದ ವೇಳೆ ಎದೆಯಲ್ಲಿ ನೋವಿನ ಅನುಭವವಾಯಿತು. ಹಿಂದೆ ಎಂದೂ ಕೂಡ ಈ ರೀತಿ ಆಗಿರಲಿಲ್ಲ. ಫ್ಯಾಮಿಲಿ ಡಾಕ್ಟರ್ ಜೊತೆ ಮಾತನಾಡಿದಾಗ ಬೆಂಗಳೂರಿಗೆ ತೆರಳಲು ಹೆಚ್ಚಿನ ಟ್ರಾಫಿಕ್ ಜಾಮ್ ಇದೆ. ಹೀಗಾಗಿ ತುಮಕೂರಿನಲ್ಲಿ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದಾರೆ. ಅವರ ಸಲಹೆ ಮೇರೆಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿ ಇಸಿಜಿ, ಇಕೋ ಪರೀಕ್ಷೆ ಮಾಡಲಾಗಿದೆ. ಮಾತ್ರೆ ತೆಗೆದುಕೊಂಡಿದ್ದೇನೆ. ಕಾರ್ಯಕ್ರಮದ ಒತ್ತಡದಿಂದ ಸರಿಯಾಗಿ ಊಟ ಮಾಡಿರಲಿಲ್ಲ. ಆಸಿಡಿಟಿ ಆಗಿದೆ. ಯಾವುದೇ ತೊಂದರೆ ಇಲ್ಲ. ಯಾರೂ ಗಾಬರಿ ಪಡುವ ಅಗತ್ಯವಿಲ್ಲ ಎಂದು ಹೇಳಿದ ಸಚಿವರು ಬೆಂಗಳೂರಿಗೆ ತೆರಳಿದ್ದಾರೆ.

