ನವದೆಹಲಿ: ಮಧ್ಯ ಪ್ರಾಚ್ಯ ಸಂಘರ್ಷದಿಂದ ಗ್ಯಾಸ್ ಪೂರೈಕೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಇದರ ಪರಿಣಾಮ ಭಾರತದಲ್ಲಿ ಯೂರಿಯಾ ಉತ್ಪಾದನೆ ಮೇಲೆ ತೀವ್ರ ಹೊಡೆತ ಬಿದ್ದಿದೆ.
ರಸಗೊಬ್ಬರ ಕಂಪನಿಗಳು ತಮ್ಮ ಸಾಮರ್ಥ್ಯದ ಅರ್ಧದಷ್ಟು ಮಾತ್ರ ಯೂರಿಯಾ ಉತ್ಪಾದನೆ ಮಾಡುತ್ತಿವೆ. ಭಾರತದ ಅತಿ ದೊಡ್ಡ ಎಲ್.ಎನ್.ಜಿ. ಸ್ವೀಕರಣ ಟರ್ಮಿನಲ್ ನಿರ್ವಹಿಸುತ್ತಿರುವ ಪೆಟ್ರೋಲ್ ನೆಟ್ ಎಲ್.ಎನ್.ಜಿ. ಕಂಪನಿ ಬೇಡಿಕೆಯಷ್ಟು ಗ್ಯಾಸ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರ ಒಟ್ಟಾರೆ ಪರಿಣಾಮ ಗೇಲ್, ಇಂಡಿಯನ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮೂಲಕ ದೇಶದಲ್ಲಿ ಗೊಬ್ಬರ ಘಟಕಗಳಿಗೆ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಯೂರಿಯಾ ಉತ್ಪಾದನೆಯಲ್ಲಿ ಎಲ್.ಎನ್.ಜಿ. ಪ್ರಮುಖ ಕಚ್ಚಾ ವಸ್ತು ಆಗಿದ್ದು, ಗ್ಯಾಸ್ ಇಲ್ಲದೆ ಗೊಬ್ಬರ ಉತ್ಪಾದನಾ ಕಂಪನಿಗಳು ಯೂರಿಯಾ ಉತ್ಪಾದನೆ ಮಾಡಲಾಗುತ್ತಿಲ್ಲ. ಈಗಾಗಲೇ ಗೊಬ್ಬರ ಕಂಪನಿಗಳಿಗೆ ಗ್ಯಾಸ್ ಪೂರೈಕೆ ಶೇಕಡ 60 ರಿಂದ 65ರಷ್ಟು ಕಡಿತವಾಗಿದೆ. ಯೂರಿಯಾ ಉತ್ಪಾದನೆ ಶೇಕಡ 50ರಷ್ಟು ಕುಸಿತವಾಗಿದೆ. ಭಾರತ ವಿಶ್ವದಲ್ಲಿ ಅತಿ ದೊಡ್ಡ ಯೂರಿಯಾ ಬಳಕೆ ಮಾಡುವ ದೇಶವಾಗಿದ್ದು, ಉತ್ಪಾದನೆ ಕುಂಠಿತವಾಗಿರುವುದರಿಂದ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

