ಚಿಕ್ಕಮಗಳೂರು: ಅಡಿಕೆ ತೋಟದಲ್ಲಿ ನೀರು ಹಾಯಿಸಲು ಹೋಗಿದ್ದ ಯುವಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾಮದ ಬಳಿ ನಡೆದಿದೆ.
ಪ್ರವೀಣ್(25) ಮೃತಪಟ್ಟ ಯುವಕ. ಭಾನುವಾರ ಮಧ್ಯಾಹ್ನ ತಮ್ಮ ಮನೆ ಸಮೀಪದ ಅಡಿಕೆ ತೋಟಕ್ಕೆ ನೀರು ಹಾಯಿಸಲು ಬೋರ್ವೆಲ್ ಬಳಿ ತೆರಳಿದ್ದಾರೆ. ಈ ವೇಳೆ ಸ್ವಿಚ್ ಆನ್ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ನೀರು ಹಾಯಿಸಲು ಹೋಗಿದ್ದ ಪ್ರವೀಣ್ ಗಂಟೆ ಕಳೆದರೂ ವಾಪಸ್ ಆಗದಿದ್ದಾಗ ಕುಟುಂಬದವರು ತೋಟದ ಬಳಿ ಹುಡುಕಾಡಿದ್ದಾರೆ. ಈ ವೇಳೆ ಬೋರ್ವೆಲ್ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪ್ರವೀಣ್ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

