ಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದೆ. ಮಹಿಳೆಯರ ಟೀಮ್ ಕಾಂಪೌಂಡ್ ಆರ್ಚರಿಯಲ್ಲಿ ಚಿಕಿಟಾ ರಾವ್ ತಾನಿಪರ್ತಿ, ಪ್ರಿತಿಕಾ ಪ್ರದೀಪ್ ಹಾಗೂ ಜ್ಯೋತಿ ಸುರೇಖಾ ವೆನ್ನಂ ಅವರನ್ನೊಳಗೊಂಡ ಭಾರತೀಯ ತಂಡ ಫೈನಲ್‌ನಲ್ಲಿ ಚೀನಾವನ್ನು 238-234 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿದೆ.
ಈ ವಿಭಾಗದಲ್ಲಿ ಭಾರತ ಚಾಂಪಿಯನ್ ಆಗಿರುವುದು ಸತತ ಎರಡನೇ ಬಾರಿ ಎಂಬುದು ವಿಶೇಷ.
ಜ್ಯೋತಿ ಸುರೇಖಾ ಅವರು ಆಂಧ್ರಪ್ರದೇಶದ ವಿಜಯವಾಡವಾಗಿದ್ದು, ಚಿಕಿಟಾ ರಾವ್ ತಾನಿಪರ್ತಿ ತೆಲಂಗಾಣದ ದೊಡ್ಡಪಳ್ಳಿ ಜಿಲ್ಲೆಯವರು. ಮತ್ತೊಬ್ಬ ಆಟಗಾರ್ತಿ ಪ್ರಿತಿಕಾ ಮಹಾರಾಷ್ಟ್ರದವರು.
ಈ ಪದಕದೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಇದುವರೆಗೆ ಭಾರತ 7 ಚಿನ್ನ, 21 ಬೆಳ್ಳಿ ಹಾಗೂ 25 ಕಂಚಿನ ಪದಕಗಳು ಸೇರಿದಂತೆ ಒಟ್ಟು 53 ಪದಕಗಳನ್ನು ಗೆದ್ದಿದೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ ಟಾಪ್-10ಕ್ಕೆ (9ನೇ ಸ್ಥಾನ) ಪ್ರವೇಶಿಸಿದೆ.
ಜ್ಯೋತಿಗೆ ‘ಕಂಬ್ಯಾಕ್’ ಬೇಕಿತ್ತು
ಜ್ಯೋತಿ ಸುರೇಖಾ ವೆನ್ನಂ ಅವರಿಗೆ ಆರ್ಚರಿ ಕ್ಷೇತ್ರದಲ್ಲಿ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ರಾಷ್ಟ್ರೀಯ ಮಟ್ಟದ ಈಜುಪಟುವಾಗಿದ್ದ ಅವರು ಬಾಲ್ಯದಲ್ಲೇ ಆರ್ಚರಿಗೆ ಕಾಲಿಟ್ಟಿದ್ದರು. ಬಳಿಕ ವೇಗವಾಗಿ ಮುನ್ನಡೆದು ವಿಶ್ವದ ಪ್ರಮುಖ ಕಾಂಪೌಂಡ್ ಆರ್ಚರಿ ಕ್ರೀಡಾಪಟುಗಳಲ್ಲಿ ಒಬ್ಬರಾದರು.
2023ರ ಏಷ್ಯನ್ ಗೇಮ್ಸ್‌ನಲ್ಲಿ ಜ್ಯೋತಿ ಐತಿಹಾಸಿಕ ಸಾಧನೆ ಮಾಡಿದ್ದರು. ಮಹಿಳೆಯರ ವೈಯಕ್ತಿಕ, ಮಹಿಳೆಯರ ತಂಡ ಹಾಗೂ ಮಿಶ್ರ ತಂಡ ವಿಭಾಗಗಳಲ್ಲಿ ಚಿನ್ನ ಗೆದ್ದು ಒಂದೇ ಆವೃತ್ತಿಯಲ್ಲಿ ಮೂರು ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆರ್ಚರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಆದರೆ ಈ ಬಾರಿ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ದಕ್ಷಿಣ ಕೊರಿಯಾದ 14 ವರ್ಷದ ಕಾಂಗ್ ಯಿಯೋನ್-ಸಿಯೋ ವಿರುದ್ಧ ಸೋತು ತಮ್ಮ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು ಕಳೆದುಕೊಂಡಿದ್ದರು. ಹೀಗಾಗಿ ತಂಡದ ಸ್ಪರ್ಧೆಯಲ್ಲಿ ಜ್ಯೋತಿಗೆ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸುವ ಅವಕಾಶ ಎದುರಾಗಿತ್ತು.
ಚಿಕಿಟಾ–ಪ್ರಿತಿಕಾ ಯುವ ಶಕ್ತಿ
ರೈತ ಕುಟುಂಬದಿಂದ ಬಂದಿರುವ ಚಿಕಿಟಾ ತಾನಿಪರ್ತಿ ಅವರಿಗೆ ಆರ್ಚರಿ ಪರಿಚಯವಾಗಿದ್ದು ತಂದೆಯ ಮೂಲಕ. ಅವರು 2ನೇ ತರಗತಿಯಲ್ಲಿದ್ದಾಗ ಪತ್ರಿಕೆಯಲ್ಲಿ ಆರ್ಚರಿ ಬಗ್ಗೆ ಓದಿದ ಬಳಿಕ ತಂದೆ ಈ ಕ್ರೀಡೆಯತ್ತ ಅವರನ್ನು ಪ್ರೋತ್ಸಾಹಿಸಿದ್ದರು. 2018ರಲ್ಲಿ ಅವರು ಅಧಿಕೃತವಾಗಿ ತರಬೇತಿ ಆರಂಭಿಸಿದರು.
2025ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಚಿಕಿಟಾ, ವಿನ್ನಿಪೆಗ್‌ನಲ್ಲಿ ನಡೆದ 2025ರ ವಿಶ್ವ ಆರ್ಚರಿ ಯುವ ಚಾಂಪಿಯನ್‌ಶಿಪ್‌ನಲ್ಲಿ ಅಂಡರ್-21 ಮಹಿಳೆಯರ ವೈಯಕ್ತಿಕ ಚಿನ್ನ ಗೆದ್ದರು. ಈ ವಿಭಾಗದಲ್ಲಿ ಆ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ನಿರ್ಮಿಸಿದರು.
ಇನ್ನು ಪ್ರಿತಿಕಾ ಪ್ರದೀಪ್ 5ನೇ ತರಗತಿಯಲ್ಲಿ ಆರ್ಚರಿಯನ್ನು ಹವ್ಯಾಸವಾಗಿ ಆರಂಭಿಸಿದ್ದರು. ಹೊಸತನ ಮತ್ತು ಕುತೂಹಲದಿಂದ ಈ ಕ್ರೀಡೆಯತ್ತ ಆಕರ್ಷಿತರಾದ ಅವರು, ಬಳಿಕ ಗಂಭೀರವಾಗಿ ತರಬೇತಿ ಪಡೆಯಲು ಆರಂಭಿಸಿದರು. 6ನೇ ತರಗತಿಯಿಂದ ಅವರ ಪೋಷಕರು ವೃತ್ತಿಪರ ತರಬೇತಿಗೆ ಸೇರಿಸಿದರು.ಅಂತರರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೆ ಏಳು ಪದಕಗಳನ್ನು ಗೆದ್ದಿರುವ ಪ್ರಿತಿಕಾ, ಭಾರತದ ಆರ್ಚರಿ ತಂಡದ ಪ್ರಮುಖ ಆಟಗಾರ್ತಿಯಾಗಿ ಬೆಳೆದಿದ್ದಾರೆ.ಆದರೆ ಬುಧವಾರ ಮೂವರ ಗುರಿ ಒಂದೇ ಆಗಿತ್ತು.
ಫೈನಲ್‌ನಲ್ಲಿ ಭಾರತದ ಪ್ರಾಬಲ್ಯ
ಫೈನಲ್‌ಗೂ ಮುನ್ನ ಭಾರತಕ್ಕೆ ದಕ್ಷಿಣ ಕೊರಿಯಾ ದೊಡ್ಡ ಸವಾಲಾಗಿ ಎದುರಾಗಿತ್ತು. ಪಂದ್ಯ ನಿರೀಕ್ಷೆಯಂತೆ ರೋಚಕವಾಗಿತ್ತು.ಮೊದಲ ಎಂಡ್‌ನಲ್ಲಿ ಎರಡೂ ತಂಡಗಳು 59-59 ಅಂಕಗಳೊಂದಿಗೆ ಸಮಬಲ ಸಾಧಿಸಿದವು.ಎರಡನೇ ಎಂಡ್‌ನಲ್ಲಿ ಜ್ಯೋತಿಯ ಅನುಭವ ಹಾಗೂ ಚಿಕಿಟಾ–ಪ್ರಿತಿಕಾ ಅವರ ಯುವ ಉತ್ಸಾಹವನ್ನು ಸಮರ್ಥವಾಗಿ ಬಳಸಿಕೊಂಡ ಭಾರತ 59-56 ಅಂತರದಲ್ಲಿ ಮುನ್ನಡೆ ಸಾಧಿಸಿತು.
ಮೂರನೇ ಎಂಡ್‌ನಲ್ಲಿ ಭಾರತ 58 ಅಂಕ ಗಳಿಸಿ ಸ್ವಲ್ಪ ಹಿನ್ನಡೆ ಕಂಡರೂ, ಎರಡನೇ ಎಂಡ್‌ನಲ್ಲಿ ಪಡೆದ ಮುನ್ನಡೆ ನಿರ್ಣಾಯಕವಾಯಿತು. ಅಂತಿಮ ಎಂಡ್‌ನಲ್ಲಿ ಕೊರಿಯಾ ಗಳಿಸಿದ 58 ಅಂಕಗಳನ್ನೇ ಭಾರತವೂ ಗಳಿಸಿ, ಪಂದ್ಯವನ್ನು 234-233 ಅಂತರದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸಿತು.
ಚೀನಾವನ್ನು ಮಣಿಸಿ ಚಿನ್ನ
ಫೈನಲ್‌ನಲ್ಲಿ ಚೀನಾ ಕಠಿಣ ಪೈಪೋಟಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಭಾರತ ಆರಂಭದಿಂದಲೇ ಭರ್ಜರಿ ಪ್ರದರ್ಶನ ನೀಡಿತು.
ಮೊದಲ ಎಂಡ್‌ನಲ್ಲಿ ಸತತ ಪರ್ಫೆಕ್ಟ್ 10ಗಳೊಂದಿಗೆ ಭಾರತ 60-58 ಅಂತರದಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಎಂಡ್‌ನಲ್ಲೂ ಭಾರತ ತನ್ನ ಸಂಯಮ ಕಾಪಾಡಿಕೊಂಡು 60-58 ಅಂತರದಲ್ಲಿ ಗೆದ್ದು ಮುನ್ನಡೆಯನ್ನು ಮತ್ತಷ್ಟು ಬಲಪಡಿಸಿತು. ಎರಡು ಎಂಡ್‌ಗಳ ಬಳಿಕ ಭಾರತ 178-176 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು.
ನಿರ್ಣಾಯಕ ಅಂತಿಮ ಎಂಡ್‌ನಲ್ಲಿ ಒತ್ತಡಕ್ಕೆ ಸಿಲುಕಿದ ಚೀನಾ ಎರಡು ಬಾರಿ 9 ಅಂಕ ಗಳಿಸಿತು. ಆದರೆ ಭಾರತ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿತು. ಆರು ಪರ್ಫೆಕ್ಟ್ 10ಗಳೊಂದಿಗೆ ಅಂತಿಮ ಎಂಡ್ ಮುಗಿಸಿದ ಭಾರತ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡಿತು.
ಚಿಕಿಟಾ ಕೆಲವು 9 ಅಂಕಗಳನ್ನು ಗಳಿಸಿದರೂ, ಜ್ಯೋತಿ ಮತ್ತು ಪ್ರಿತಿಕಾ ಬಹುತೇಕ ಪರಿಪೂರ್ಣ ಪ್ರದರ್ಶನ ನೀಡಿದರು. ಮೂವರ ನಿಖರ ಶೂಟಿಂಗ್‌ನಿಂದ ಭಾರತ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡು, ವಿಶ್ವ ದಾಖಲೆಯನ್ನೂ ಸರಿಗಟ್ಟಿತು.ಭಾರತದ ಅನುಭವ, ಯುವ ಉತ್ಸಾಹ ಮತ್ತು ತಂಡದ ಒಗ್ಗಟ್ಟು ಮತ್ತೊಮ್ಮೆ ಆರ್ಚರಿ ಅಂಗಳದಲ್ಲಿ ಸುವರ್ಣ ಸಾಧನೆಗೆ ಕಾರಣವಾಯಿತು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ
ಏಷ್ಯನ್ ಗೇಮ್ಸ್ 2026ರ ಮಹಿಳೆಯರ ಕಾಂಪೌಂಡ್ ಟೀಮ್ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಂ, ಪ್ರಿತಿಕಾ ಪ್ರದೀಪ್ ಮತ್ತು ಚಿಕಿಟಾ ತಾನಿಪರ್ತಿ ಚಿನ್ನದ ಪದಕ ಗೆದ್ದು ಭಾರತೀಯ ಆರ್ಚರಿಗೆ ಮತ್ತೊಂದು ಸುವರ್ಣ ಅಧ್ಯಾಯ ಬರೆದಿದ್ದಾರೆ.
ಈ ಅದ್ಭುತ ಸಾಧನೆ ಮಾಡಿದ ಚಾಂಪಿಯನ್ ತ್ರಯಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಅವರ ನಿಖರತೆ, ಸಂಯಮ ಹಾಗೂ ತಂಡದ ಒಗ್ಗಟ್ಟಿನ ಸಂಕಲ್ಪ ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣವನ್ನು ತಂದಿದೆ. ಮುಂದಿನ ದಿನಗಳಲ್ಲೂ ಅವರು ಇನ್ನಷ್ಟು ಯಶಸ್ಸು ಹಾಗೂ ಕೀರ್ತಿಯನ್ನು ಗಳಿಸಲಿ ಎಂದು ಹಾರೈಸುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

