ಮುಂಬೈ: ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಧುರಂಧರ್: ದಿ ರಿವೆಂಜ್’ ಮಾರ್ಚ್ 18 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಆದರೆ, ಈ ಸಿನಿಮಾದ ತೀವ್ರಗತಿಯ ಫೈಟ್ ಸೀನ್ ಒಂದರಲ್ಲಿ ಚಿತ್ರತಂಡ ಮಾಡಿರುವ ಸಣ್ಣ ತಪ್ಪು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಿನಿಮಾದ ಪ್ರಮುಖ ದೃಶ್ಯವೊಂದರಲ್ಲಿ ಕ್ಯಾಮರಾಮನ್ ಪ್ರತಿಬಿಂಬ ಕಾಣಿಸಿಕೊಂಡಿದ್ದು, ಇದನ್ನು ಪತ್ತೆಹಚ್ಚಿರುವ ಪ್ರೇಕ್ಷಕರು ತರಹೇವಾರಿ ಕಾಮೆಂಟ್‌ಗಳ ಮೂಲಕ ಚಿತ್ರತಂಡವನ್ನು ಕಾಲೆಳೆಯುತ್ತಿದ್ದಾರೆ.
ಏನಿದು ಘಟನೆ? ಸಿನಿಮಾದಲ್ಲಿ ಬಾಲ್ಯದ ಸ್ನೇಹಿತರಾದ ಪಿಂಡಾ ಮತ್ತು ಹಮ್ಜಾ (ಜಸ್ಕಿರತ್) ನಡುವೆ ನಡೆಯುವ ತೀವ್ರ ಸ್ವರೂಪದ ಸಂಘರ್ಷದ ದೃಶ್ಯವೊಂದಿದೆ. ಡ್ರಗ್ ಮಾಫಿಯಾ ಮತ್ತು ಸ್ಪೈ ಕಾರ್ಯಾಚರಣೆಯ ಹಿನ್ನೆಲೆಯ ಈ ದೃಶ್ಯದಲ್ಲಿ ಇಬ್ಬರ ನಡುವೆ ಮಾರಾಮಾರಿ ನಡೆಯುತ್ತದೆ. ಈ ವೇಳೆ ಬಾತ್‌ಟಬ್ ಬಳಿ ನಡೆಯುವ ಫೈಟ್ ಸೀನ್‌ನಲ್ಲಿ, ಅಲ್ಲಿನ ಕನ್ನಡಿಯ ಮೇಲೆ ಕ್ಯಾಮರಾಮನ್ ಪ್ರತಿಬಿಂಬ ಸ್ಪಷ್ಟವಾಗಿ ಕಾಣಿಸಿದೆ. ಈ ದೃಶ್ಯದ ಸ್ಕ್ರೀನ್‌ಶಾಟ್‌ಗಳು ಮತ್ತು ಕ್ಲಿಪ್‌ಗಳು ಈಗ ಎಕ್ಸ್ (X) ನಲ್ಲಿ ವೈರಲ್ ಆಗುತ್ತಿವೆ.
ನೆಟ್ಟಿಗರ ತಮಾಷೆಯ ಪ್ರತಿಕ್ರಿಯೆ: ಈ ತಾಂತ್ರಿಕ ಲೋಪವನ್ನು ಕಂಡ ನೆಟ್ಟಿಗರು ‘ಪೀಕ್ ಗ್ರಾಟಿಟ್ಯೂಡ್’ (Peak Gratitude) ಎಂಬ ಹ್ಯಾಶ್‌ಟ್ಯಾಗ್ ಬಳಸಿ ಕಾಮೆಂಟ್ ಮಾಡುತ್ತಿದ್ದಾರೆ. “ಸಿನಿಮಾದ ಹಿಂದೆ ಕಷ್ಟಪಡುವ ತೆರೆಯ ಹಿಂದಿನ ನಾಯಕರನ್ನು ನಮಗೆ ತೋರಿಸಿದ್ದಕ್ಕೆ ಧನ್ಯವಾದಗಳು ಆದಿತ್ಯ ಧರ್” ಎಂದು ಸುನಿಲ್ ಗೋರಿಯಾ ಎಂಬುವವರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಇದನ್ನು ಕ್ರಿಸ್ಟೋಫರ್ ನೋಲನ್ ಅವರ ‘ಡಾರ್ಕ್ ನೈಟ್’ ಸಿನಿಮಾದ ಲೋಪಗಳಿಗೆ ಹೋಲಿಸಿ, “ಇದು ಪೀಕ್ ಡಿಟೇಲಿಂಗ್” ಎಂದು ವ್ಯಂಗ್ಯವಾಡಿದ್ದಾರೆ.
ಆದರೆ, ಚಿತ್ರದ ಬೆಂಬಲಿಗರು ಇದನ್ನು ಎಐ (AI) ಮೂಲಕ ಸೃಷ್ಟಿಸಿದ ನಕಲಿ ಫೋಟೋ ಎಂದು ವಾದಿಸುತ್ತಿದ್ದಾರೆ. ಚಿತ್ರದ ಕಥೆ ಮತ್ತು ದೇಶಪ್ರೇಮದ ಬಗ್ಗೆ ಪರ-ವಿರೋಧ ಚರ್ಚೆಗಳ ನಡುವೆಯೇ, ಈ ತಾಂತ್ರಿಕ ಪ್ರಮಾದವು ಸಿನಿಮಾಗೆ ಹೆಚ್ಚಿನ ಪ್ರಚಾರ ಸಿಗುವಂತೆ ಮಾಡಿದೆ. ಒಟ್ಟಾರೆಯಾಗಿ, ‘ಉರಿ’ ಖ್ಯಾತಿಯ ಆದಿತ್ಯ ಧರ್ ಅವರ ಈ ಸಿನಿಮಾದಲ್ಲಿನ ಸಣ್ಣ ಮಿಸ್ಟೇಕ್ ಈಗ ಸಿನಿಪ್ರಿಯರಿಗೆ ದೊಡ್ಡ ಮನರಂಜನೆಯ ವಸ್ತುವಾಗಿದೆ.

