ತುಮಕೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಏಪ್ರಿಲ್ 1ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಅವರು ಲಿಂ. ಡಾ. ಶ್ರೀ. ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಮತ್ತು ಗುರುವಂದನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಶನಿವಾರ ಸಿದ್ದಗಂಗಾ ಮಠದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಿದ ಬಳಿಕ ಕೇಂದ್ರ ಸಚಿವ ವಿ. ಸೋಮಣ್ಣ ಸುದ್ದಿಗಾರರೊಂದಿಗೆ ಮಾತನಾಡಿ ವಿಷಯ ತಿಳಿಸಿದ್ದಾರೆ. ಮಾರ್ಚ್ 31 ರಂದು ರಾತ್ರಿ 8.30 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರುಮು ಬೆಂಗಳೂರಿಗೆ ಆಗಮಿಸಲಿದ್ದಾರೆ. ಏಪ್ರಿಲ್ 1ರಂದು ಬೆಳಗ್ಗೆ 9:30ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ಆಗಮಿಸಲಿದ್ದಾರೆ.
ಮೊದಲಿಗೆ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆಯುವ ರಾಷ್ಟ್ರಪತಿಗಳು, ನಂತರ ಮಕ್ಕಳನ್ನು ಭೇಟಿಯಾಗಲಿದ್ದು, ಅಲ್ಲಿಂದ ಕಾರ್ಯಕ್ರಮದ ವೇದಿಕೆಗೆ ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ.

