ಬೆಂಗಳೂರು: ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಐಷಾರಾಮಿ ಲಾಂಬೊರ್ಗಿನಿ ಕಾರು ಡ್ರಿಫ್ಟಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರನ್ನು ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮನೆಯಿಂದ ವಶಕ್ಕೆ ಪಡೆಯಲಾಗಿದೆ.
ರಿಕ್ಕಿ ರೈ ಅವರೇ ಲಾಂಬೋರ್ಗಿನಿ ಕಾರನ್ನು ಡ್ರಿಫ್ಟಿಂಗ್ ಮಾಡಿದ್ದರೇ? ಎಂಬ ಶಂಕೆ ವ್ಯಕ್ತವಾಗಿದೆ. ಕಾರಿನ ನಂಬರ್ ಆಧರಿಸಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಕಾರನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾಗ ಕಾರು ರಿಇಕ್ಕಿ ರೈ ಅವರ ಸದಾಶುವನಗರ ನಿವಾಸದಲ್ಲಿ ನಿಲ್ಲಿಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಿಕ್ಕಿ ರೈ ಅವರ ಮನೆಯಿಂದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ರಿಕ್ಕಿ ರೈ ಅವರಿಗೆ ನೋಟಿಸ್ ನೀಡಿದ್ದಾರೆ. ಆದರೆ ಕಾರಿನ ನಿಜವಾದ ಮಾಲಿಕ ಯಾರು? ಯಾರ ಹೆಸರಲ್ಲಿ ಕಾರು ನೋಂದಣಿಯಾಗಿದೆ? ಎಂಬ ಬಗ್ಗೆ ಯಾವುದೇ ಮಾಹಿತಿ ಪೊಲೀಸರಿಗೂ ಲಭ್ಯವಾಗಿಲ್ಲ ಎನ್ನಲಾಗಿದೆ.
ಮಾರ್ಚ್ 21ರಂದು ಬೆಳಗಿನಜಾವ ಐಷಾರಾಮಿ ಲಾಂಬೊರ್ಗಿನಿ ಕಾರು ಡ್ರಿಫ್ಟಿಂಗ್ ಮಾಡಿ ಅಪಾಯಕಾರಿಯಾಗಿ ಚಾಲನೆ ಮಾಡಿದ್ದ ಘಟನೆ ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ನಲ್ಲಿ ಬೆಳಕಿಗೆ ಬಂದಿತ್ತು. ಕಾರು ಡ್ರಿಫ್ಟಿಂಗ್ ಕೇಸ್ ಗೆ ಸಂಬಂಧಿಸಿದಂತೆ ಅಪರಿಚಿತ ಕಾರು ಚಾಲಕನ ವಿರುದ್ಧ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.
ಬೆಳಗಿನಜಾವ 2 ಗಂಟೆ ಸುಮಾರಿಗೆ ಲಾಂಬೊರ್ಗಿನಿ ಕಾರು ಅನಿಲ್ ಕುಂಬ್ಳೆ ವೃತ್ತದ ಬಳಿ ಬಂದಿತ್ತು. ಈ ವೇಳೆ ಕಾರು ಡ್ರಿಫ್ಟಿಂಗ್ ಮಾಡಲಾಗಿದೆ. ಇದನ್ನು ಕಂಡು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕಬ್ಬನ್ ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಸಿಟಿವಿ ಪರಿಶೀಲನೆ ವೇಳೆ KA-05 NR 0009 ನಂಬರ್ನ ಲ್ಯಾಂಬೋರ್ಗಿನಿ ಕಾರು ಎಂಬುದು ಗೊತ್ತಾಗಿದೆ. ಕಾರಿನ ಮಾಲೀಕರನ್ನು ಪತ್ತೆ ಮಾಡಲಾಗುತ್ತಿದ್ದು, ಅಜಾಗರೂಕತೆ ಹಾಗೂ ಅಪಾಯಕಾರಿ ಚಾಲನೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪಶ್ಚಿಮ ವಿಭಾಗದ ಸಂಚಾರ ಪ್ರಭಾರ ಡಿಸಿಪಿ ಸಾಹಿಲ್ ಬಾಂಗ್ಲಾ ಪ್ರತಿಕ್ರಿಯಿಸಿ, ಬೆಳಗಿನಜಾವ 2 ರಿಂದ 3ಗಂಟೆ ಸುಮಾರಿಗೆ ಕಾರು ಡ್ರಿಫ್ಟಿಂಗ್ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಕಾರಿನ ಮಾಲೀಕರು ಯಾರು ಎಂಬುದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವಂತಿಲ್ಲ. ಪ್ರಕರಣ ಸಂಬಂಧ ಆರ್.ಸಿ ರದ್ದು ಮಾಡಲು ಆರ್ಟಿಒಗೆ ಪತ್ರ ಬರೆದು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ಧಾರೆ.
ಕಾರ್ ಡ್ರಿಫ್ಟಿಂಗ್ ಎಂದರೆ ವಾಹನದ ಹಿಂದಿನ ಚಕ್ರಗಳ ಹಿಡಿತವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿ, ತಿರುವುಗಳಲ್ಲಿ ನಿಯಂತ್ರಿತ ರೀತಿಯಲ್ಲಿ ಜಾರುವಂತೆ ಮಾಡುವ ಸಾಹಸಮಯ ಚಾಲನಾ ತಂತ್ರವಾಗಿದೆ. ಈ ಕಲೆಗೆ ಹೆಚ್ಚಿನ ಕೌಶಲ್ಯದ ಅಗತ್ಯವಿದೆ. ವೇಗ, ನಿಯಂತ್ರಣ ಮತ್ತು ಕೌಶಲ್ಯವನ್ನು ಪ್ರದರ್ಶಿಸುವ ಮೋಟಾರ್ಸ್ಪೋರ್ಟ್ ಇದಾಗಿದೆ.

