ನವದೆಹಲಿ: ವಿಮಾನಯಾನ ಪ್ರಯಾಣಕ್ಕೂ ಯುದ್ಧದ ಬಿಸಿ ತಟ್ಟಿದೆ. ಏಪ್ರಿಲ್ 1ರಿಂದ ವಿಮಾನ ಪ್ರಯಾಣ ದರ ಹೆಚ್ಚಾಗುವ ಸಾಧ್ಯತೆ ಇದೆ. ಶೇಕಡ 30ರಷ್ಟು ವಿಮಾನ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆಯಿದ್ದು, ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿಯಾಗಬಹುದು ಎಂದು ಹೇಳಲಾಗಿದೆ.
ಮಧ್ಯಪ್ರಾಚ್ಯ ಯುದ್ಧದಿಂದ ಉಂಟಾದ ಇಂಧನ ಬಿಕ್ಕಟ್ಟು ವಿಮಾನಯಾನವನ್ನು ದುಬಾರಿಯಾಗಿಸಿದೆ. ಏಪ್ರಿಲ್ 1ರಿಂದ ವಿಮಾನಯಾನ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ನಾಗರಿಕ ವಿಮಾನಯಾನ ಸಚಿವ ಕೆ. ರಾಮ ಮೋಹನ್ ನಾಯ್ಡು ಈ ಬಗ್ಗೆ ಸುಳಿವು ನೀಡಿದ್ದಾರೆ. ವಿಮಾನ ಯಾನಕ್ಕೆ ಬಳಸುವ ಎಟಿಎಫ್ ದರವನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಎಟಿಎಫ್ ದರ ಏರಿಕೆಯ ಪರಿಣಾಮ ಏಪ್ರಿಲ್ 1ರ ನಂತರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಪರಿಸ್ಥಿತಿ ಮೇಲೆ ನಿಗಾ ವಹಿಸಿದೆ. ಯುದ್ಧವು ವಿಮಾನಯಾನ ಸಂಸ್ಥೆಗಳು ಮತ್ತು ಅವುಗಳ ಕಾರ್ಯಾಚರಣೆಯ ಮೇಲೆ ಹಣಕಾಸಿನ ಒತ್ತಡ ಹೆಚ್ಚಿಸಿದೆ. ಬಿಕ್ಕಟ್ಟಿನ ಪರಿಣಾಮ ಕಡಿಮೆಯಾಗಿಸಲು ವಿವಿಧ ಸಚಿವಾಲಯಗಳು ಸಮನ್ವಯದಿಂದ ಕೆಲಸ ಮಾಡುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

