ಕಾರವಾರ: ರಾಜ್ಯದ 25 ಸ್ಥಳಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಅಂಬೆವಾಡಿಯ ಸಾರಿಗೆ ಇಲಾಖೆ ಸಹಾಯಕ ಪ್ರಾದೇಶಿಕ ಕಚೇರಿಯಲ್ಲಿ ನೂತನವಾಗಿ ನಿರ್ಮಿಸಿದ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸುಮಾರು 20 ಸ್ಥಳಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಿಸಲಾಗಿದೆ. ಇನ್ನು ಬಾಕಿ ಉಳಿದ 25 ಸ್ಥಳಗಳಲ್ಲಿಯೂ ಆದಷ್ಟು ಬೇಗನೆ ಸ್ವಯಂಚಾಲಿತಾ ಚಾಲನಾ ಪರೀಕ್ಷಾ ಪಥ ನಿರ್ಮಿಸಲಾಗುವುದು. ಇದರಿಂದ ಮಧ್ಯವರ್ತಿಗಳಿಗೆ, ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳ ಹಸ್ತಕ್ಷೇಪ ತಪ್ಪಲಿದೆ ಎಂದು ಹೇಳಿದ್ದಾರೆ.
ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥದಲ್ಲಿ ಸೆನ್ಸಾರ್ ಅಳವಡಿಸಲಾಗಿದ್ದು, ಇದರ ಮೂಲಕ ಚಾಲನಾ ಪರೀಕ್ಷೆ ಗಮನಿಸಲಾಗುತ್ತದೆ. ಸರಿಯಾಗಿ ಚಾಲನೆ ಮಾಡುವುದನ್ನು ಕಲಿತವರು ಮಾತ್ರ ಉತ್ತೀರ್ಣರಾಗಲು ಸಾಧ್ಯ. ತಪ್ಪಿದಲ್ಲಿ ಮತ್ತೆ ತರಬೇತಿ ಪಡೆದು ಪರೀಕ್ಷೆಗೆ ಬರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಶಾಸಕ ಆರ್.ವಿ. ದೇಶಪಾಂಡೆ ಮೊದಲಾದವರು ಇದ್ದರು.

