ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. 75ನೇ ವಯಸ್ಸಿನಲ್ಲೂ ಅವರು ಅತೀವ ಉತ್ಸಾಹದಿಂದ ಕೆಲಸ ಮಾಡಲು ಅವರ ಶಿಸ್ತುಬದ್ಧ ಜೀವನಶೈಲಿಯೇ ಮುಖ್ಯ ಕಾರಣ.
ದಿನದ 18 ಗಂಟೆಗಳ ಕಾಲ ನಿರಂತರ ಕೆಲಸ, ದೇಶ-ವಿದೇಶಗಳ ಪ್ರವಾಸದ ನಡುವೆಯೂ 75ರ ಹರೆಯದ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿಗೂ ಯುವಕರಿಗಿಂತ ಹೆಚ್ಚು ಉತ್ಸಾಹದಿಂದ ಇರುವುದು ಹೇಗೆ ಎಂಬುದು ಅನೇಕರ ಕುತೂಹಲ. ಅವರ ಈ ಚೈತನ್ಯದ ಹಿಂದೆ ಇರುವುದು ಕೇವಲ ದೃಢ ಸಂಕಲ್ಪವಲ್ಲ, ಬದಲಾಗಿ ದಶಕಗಳಿಂದ ಅವರು ಪಾಲಿಸಿಕೊಂಡು ಬರುತ್ತಿರುವ ಕಠಿಣ ಆಹಾರ ಪದ್ಧತಿ ಮತ್ತು ವಿಶಿಷ್ಟ ಉಪವಾಸದ ಶಿಸ್ತು!”
ಮೋದಿಯವರ ಆರೋಗ್ಯದ ಗುಟ್ಟು ಕೇವಲ ಜಿಮ್ ಅಥವಾ ವ್ಯಾಯಾಮಕ್ಕೆ ಸೀಮಿತವಾಗಿಲ್ಲ. ಬದಲಾಗಿ, ಪ್ರಾಚೀನ ಭಾರತೀಯ ಪರಂಪರೆಯಾದ ಚಾತುರ್ಮಾಸ ಮತ್ತು ನವರಾತ್ರಿ ಉಪವಾಸಗಳನ್ನು ಅವರು ಅನುಸರಿಸುವ ರೀತಿ ಅಚ್ಚರಿ ಮೂಡಿಸುವಂತಿದೆ. ಕೇವಲ ಬಿಸಿ ನೀರು ಮತ್ತು ಹಣ್ಣುಗಳನ್ನು ಸೇವಿಸುತ್ತಾ ಇಂದ್ರಿಯಗಳ ಜಾಗೃತಿ ಹಾಗೂ ಮಾನಸಿಕ ಸ್ಪಷ್ಟತೆಯನ್ನು ಅವರು ಹೇಗೆ ಸಾಧಿಸುತ್ತಾರೆ? ಅವರ ‘ಡಯಟ್ ಪ್ಲಾನ್’ನಲ್ಲಿರುವ ಅಸಲಿ ರಹಸ್ಯಗಳೇನು ಎಂಬ ಪೂರ್ಣ ವಿವರ ಇಲ್ಲಿದೆ ನೋಡಿ.
ಮೋದಿಯವರ ಉಪವಾಸ ಕ್ರಮ (Fasting Routine) ಅತ್ಯಂತ ವಿಶೇಷವಾದುದು. ಈ ಬಗ್ಗೆ ಅವರು ಈ ಹಿಂದೆ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರಿಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದರು. ಉಪವಾಸವು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ, ಮಾನಸಿಕ ಸ್ಪಷ್ಟತೆಗೂ ಸಹಕಾರಿ ಎಂದು ಅವರು ಹೇಳಿದ್ದಾರೆ.
ಇಂದ್ರಿಯಗಳ ಜಾಗೃತಿ : ಉಪವಾಸದ ಸಮಯದಲ್ಲಿ ನಮ್ಮ ಇಂದ್ರಿಯಗಳು (ವಾಸನೆ, ರುಚಿ, ಸ್ಪರ್ಶ) ಸಾಮಾನ್ಯಕ್ಕಿಂತ ಹೆಚ್ಚು ಚುರುಕಾಗಿ ಕೆಲಸ ಮಾಡುತ್ತವೆ. “ಉಪವಾಸದಲ್ಲಿದ್ದಾಗ ನೀರಿನ ವಾಸನೆಯನ್ನೂ ಸಹ ಸ್ಪಷ್ಟವಾಗಿ ಗುರುತಿಸಬಹುದು. ಪಕ್ಕದಲ್ಲಿ ಯಾರಾದರೂ ಚಹಾ ಅಥವಾ ಕಾಫಿ ಹಿಡಿದು ಹೋದರೆ ಅದರ ವಾಸನೆ ತಕ್ಷಣವೇ ತಿಳಿಯುತ್ತದೆ” ಎಂದು ಮೋದಿ ವಿವರಿಸಿದ್ದಾರೆ.
ಆಲೋಚನೆಯಲ್ಲಿ ಸ್ಪಷ್ಟತೆ : ಉಪವಾಸದ ಅವಧಿಯಲ್ಲಿ ಹೊಸ ಆಲೋಚನೆಗಳು ಮೂಡುತ್ತವೆ ಮತ್ತು ಯಾವುದೇ ವಿಷಯದ ಬಗ್ಗೆ ಸ್ಪಷ್ಟವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು ಅವರ ಅನುಭವ.
ಚಾತುರ್ಮಾಸ ಮತ್ತು ನವರಾತ್ರಿ ಉಪವಾಸದ ಕಠಿಣ ನಿಯಮಗಳು
ಪ್ರಾಚೀನ ಭಾರತೀಯ ಸಂಪ್ರದಾಯವಾದ ಚಾತುರ್ಮಾಸವನ್ನು ಮೋದಿ ತಪ್ಪದೇ ಪಾಲಿಸುತ್ತಾರೆ. ಜೂನ್ ಮಧ್ಯಭಾಗದಿಂದ ದೀಪಾವಳಿಯವರೆಗಿನ ಈ ನಾಲ್ಕು ತಿಂಗಳ ಅವಧಿಯಲ್ಲಿ ಅವರು ದಿನಕ್ಕೆ ಕೇವಲ ಒಂದು ಬಾರಿ ಮಾತ್ರ ಆಹಾರ ಸೇವಿಸುತ್ತಾರೆ. ಇದರಿಂದ ಶರೀರ ಹಗುರವಾಗಿರುತ್ತದೆ ಎಂಬುದು ಅವರ ಅಭಿಪ್ರಾಯ.
1. ಮುಂಜಾನೆಯ ಯೋಗ ಮತ್ತು ಪ್ರಾಣಾಯಾಮ: ಪ್ರಧಾನಿ ಮೋದಿ ಅವರ ದಿನಚರಿ ಮುಂಜಾನೆ 5 ಗಂಟೆಗೆ ಆರಂಭವಾಗುತ್ತದೆ. ಪ್ರತಿದಿನ ತಪ್ಪದೇ ಯೋಗ, ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರ ಮಾಡುವುದು ಅವರ ಆರೋಗ್ಯದ ಮೂಲ ಮಂತ್ರ. ಇದು ಅವರ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ದಿನವಿಡೀ ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ.
2. ಸಮತೋಲಿತ ಸಸ್ಯಾಹಾರ ಪದ್ಧತಿ: ಮೋದಿಯವರು ಸಂಪೂರ್ಣ ಸಸ್ಯಾಹಾರಿಯಾಗಿದ್ದು, ಅತ್ಯಂತ ಸರಳ ಆಹಾರವನ್ನು ಇಷ್ಟಪಡುತ್ತಾರೆ. ಕಿಚಡಿ, ಮೊಸರು ಮತ್ತು ಸಾಂಪ್ರದಾಯಿಕ ಗುಜರಾತಿ ಶೈಲಿಯ ಆಹಾರ ಅವರ ನೆಚ್ಚಿನದು. ಅತಿಯಾದ ಮಸಾಲೆ ಅಥವಾ ಎಣ್ಣೆಯುಕ್ತ ಪದಾರ್ಥಗಳಿಂದ ಅವರು ದೂರವಿರುತ್ತಾರೆ.
3. ಉಪವಾಸದ ಶಿಸ್ತು: ದಶಕಗಳಿಂದಲೂ ಮೋದಿ ಅವರು ವರ್ಷಕ್ಕೆ ಎರಡು ಬಾರಿ ಬರುವ ನವರಾತ್ರಿಯ ಒಂಬತ್ತು ದಿನಗಳ ಕಾಲ ಕಠಿಣ ಉಪವಾಸ ಮಾಡುತ್ತಾರೆ. ಈ ಸಮಯದಲ್ಲಿ ಅವರು ಕೇವಲ ಬಿಸಿ ನೀರು ಅಥವಾ ಕೆಲವೊಮ್ಮೆ ಕೇವಲ ಹಣ್ಣುಗಳನ್ನು ಮಾತ್ರ ಸೇವಿಸುತ್ತಾರೆ. ಇದು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು (Detoxification) ಸಹಕಾರಿ ಎನ್ನುತ್ತಾರೆ ಅವರು.
4. ಬಿಸಿ ನೀರಿನ ಬಳಕೆ: ಪ್ರಧಾನಿಯವರು ಹೆಚ್ಚಾಗಿ ಬಿಸಿ ನೀರನ್ನೇ ಕುಡಿಯುತ್ತಾರೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ಗಂಟಲಿನ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಅವರ ನಂಬಿಕೆ. ದೀರ್ಘಕಾಲದ ಭಾಷಣಗಳ ನಂತರವೂ ಅವರ ಧ್ವನಿ ಗಂಭೀರವಾಗಿರಲು ಇದು ಒಂದು ಕಾರಣ.
5. ನಿದ್ರೆ ಮತ್ತು ಧ್ಯಾನ: ಕೆಲಸದ ಒತ್ತಡದ ನಡುವೆಯೂ ಅವರು ದಿನಕ್ಕೆ 4 ರಿಂದ 5 ಗಂಟೆಗಳ ಕಾಲ ಗಾಢ ನಿದ್ರೆ ಮಾಡುತ್ತಾರೆ. ದಣಿದಾಗ ಧ್ಯಾನದ ಮೊರೆ ಹೋಗುವ ಅವರು, ಪ್ರಕೃತಿಯ ನಡುವೆ ಕಾಲ ಕಳೆಯುವುದನ್ನು ಇಷ್ಟಪಡುತ್ತಾರೆ.
ನವರಾತ್ರಿ ಉಪವಾಸ: ನವರಾತ್ರಿಯ ಒಂಬತ್ತು ದಿನಗಳ ಕಾಲ ಮೋದಿ ಅತ್ಯಂತ ಕಠಿಣ ಉಪವಾಸ ಮಾಡುತ್ತಾರೆ.ಈ ಸಮಯದಲ್ಲಿ ಅವರು ಯಾವುದೇ ಆಹಾರ ಸೇವಿಸುವುದಿಲ್ಲ, ಕೇವಲ ಬಿಸಿನೀರನ್ನು ಮಾತ್ರ ಕುಡಿಯುತ್ತಾರೆ.ಬಿಸಿ ನೀರು ಕುಡಿಯುವ ಅಭ್ಯಾಸವು ಅವರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ.
ಚೈತ್ರನ ವರಾತ್ರಿ: ಈ ಸಮಯದಲ್ಲಿ ಒಂಬತ್ತು ದಿನಗಳ ಕಾಲ ದಿನಕ್ಕೆ ಒಮ್ಮೆ ಮಾತ್ರ ಒಂದೇರೀತಿಯಹಣ್ಣನ್ನು ಸೇವಿಸುತ್ತಾರೆ. ಉದಾಹರಣೆಗೆ, ಒಮ್ಮೆ ಪಪ್ಪಾಯಿ ಆಯ್ದುಕೊಂಡರೆ ಒಂಬತ್ತು ದಿನಗಳ ಕಾಲ ಪಪ್ಪಾಯಿ ಹೊರತುಪಡಿಸಿ ಬೇರೇನನ್ನೂ ತಿನ್ನುವುದಿಲ್ಲ.
ಗಮನಿಸಿ: ಈ ಮಾಹಿತಿಯು ಕೇವಲ ಮಾಹಿತಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಬದಲಾವಣೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

