ಬೆಂಗಳೂರು : ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧ ತಯಾರಿಕೆ ಮತ್ತು ಮಾರಾಟ ಜಾಲ ಪತ್ತೆಯಾದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಶಾಂತ್ ರಂಜನ್ ಬಾಬುನನ್ನು ಪೊಲೀಸರು ಬಂಧಿಸಿದ್ದಾರೆ.
ದುಬೈನ ಶಾರ್ಜಾದಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB) ಇಂದು ಮುಂಜಾನೆ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಆರೋಪಿಯ ವಿರುದ್ಧ ಈಗಾಗಲೇ ಲುಕ್‌ಔಟ್ ನೋಟಿಸ್ ಜಾರಿಯಾಗಿತ್ತು. ಹೀಗಾಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಇಮಿಗ್ರೇಷನ್ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ನಂತರ ವಿಮಾನ ನಿಲ್ದಾಣದ ಅಧಿಕಾರಿಗಳು ಆರೋಪಿಯನ್ನು ಎಸಿಪಿ ಅಂಜನ್ ಕುಮಾರ್ ನೇತೃತ್ವದ ತಂಡಕ್ಕೆ ಹಸ್ತಾಂತರಿಸಿದ್ದಾರೆ. ಬಳಿಕ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಆರೋಪ ಎದುರಿಸುತ್ತಿರುವ ನಕಲಿ ಔಷಧ ತಯಾರಿಕೆ ಜಾಲದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ, ಪ್ರಶಾಂತ್ ರಂಜನ್ ಬಾಬು ಪ್ರಮುಖ ಸೂತ್ರಧಾರ ಎಂಬುದು ತಿಳಿದುಬಂದಿತ್ತು ಎಂದು ವರದಿ ತಿಳಿಸಿದೆ.
ಆರೋಪಿಯು ವಿದೇಶಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಆತನ ಬಂಧನಕ್ಕಾಗಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಇದೀಗ ಪ್ರಮುಖ ಆರೋಪಿಯ ಬಂಧನವಾಗಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ರಾಮನಗರ ಜಿಲ್ಲೆಯ ದೊಡ್ಡೇರಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ಎನ್ನಲಾದ ನಕಲಿ ಔಷಧ ತಯಾರಿಕೆ ಮತ್ತು ಮರುಪ್ಯಾಕಿಂಗ್ ಜಾಲವನ್ನು ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದರು.
ಪೊಲೀಸರಿಗೆ ಫಾರ್ಮ್‌ಹೌಸ್‌ಗೆ ಅನುಮಾನಾಸ್ಪದವಾಗಿ ವಾಹನಗಳು ಬಂದು ಹೋಗುತ್ತಿರುವುದು ಹಾಗೂ ಬಾಕ್ಸ್‌ಗಳನ್ನು ಲೋಡ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಸ್ಥಳೀಯರಿಂದ ಬಂದ ಮಾಹಿತಿಯ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದಾಗ ನಕಲಿ ಔಷಧ ಜಾಲ ಬೆಳಕಿಗೆ ಬಂದಿದೆ. ಬಳಿಕ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿಯಾಗಿ ಪರಿಶೀಲನೆ ನಡೆಸಲಾಗಿದೆ.
ಪೋರ್ಟರ್ ಆ್ಯಪ್ ಮೂಲಕ ಸರಬರಾಜು?
ತನಿಖೆಯಲ್ಲಿ, ನಕಲಿ ಔಷಧಿಗಳನ್ನು ಪೋರ್ಟರ್ ಆ್ಯಪ್ ಮೂಲಕ ವಿವಿಧ ಸ್ಥಳಗಳಿಗೆ ಕಳುಹಿಸಲಾಗುತ್ತಿತ್ತು ಎಂಬ ಮಾಹಿತಿ ಕೂಡ ಹೊರಬಂದಿದೆ. ವಾರಕ್ಕೆ ಸುಮಾರು 100 ಬಾಟಲಿಗಳಷ್ಟು ಔಷಧಿಗಳನ್ನು ವಿವಿಧ ಕಡೆಗಳಿಗೆ ಕಳುಹಿಸಲಾಗುತ್ತಿತ್ತು ಎಂದು ವರದಿಯಾಗಿದೆ.
*ಮೈಸೂರು ದಸರಾ ಪುಸ್ತಕ ಮೇಳ: ಹೊಸ ಪುಸ್ತಕಗಳ ಬಿಡುಗಡೆಗೆ ಲೇಖಕರು, ಪ್ರಕಾಶಕರಿಂದ ಅರ್ಜಿ ಆಹ್ವಾನ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ‘ದಸರಾ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ–2026’ರಲ್ಲಿ ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಲು ಆಸಕ್ತ ಲೇಖಕರು ಹಾಗೂ ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೈಸೂರು ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಎದುರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಅಕ್ಟೋಬರ್ 11 ರಿಂದ 20ರವರೆಗೆ ಪುಸ್ತಕ ಮೇಳ ನಡೆಯಲಿದೆ. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಚಾರ ಸಂಕಿರಣಗಳ ಜೊತೆಗೆ, 2026ರಲ್ಲಿ ಪ್ರಕಟವಾದ ನೂತನ ಕೃತಿಗಳನ್ನು ನಾಡಿನ ಖ್ಯಾತ ಸಾಹಿತಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲು ಕನ್ನಡ ಪುಸ್ತಕ ಪ್ರಾಧಿಕಾರ ನಿರ್ಧರಿಸಿದೆ.
ಅರ್ಜಿ ಸಲ್ಲಿಕೆ ಮತ್ತು ನಿಯಮಗಳು:
ಆಸಕ್ತರು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ (https://kpp.karnataka.gov.in) ಮೂಲಕ ನಿಗದಿತ ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಬಿಡುಗಡೆ ಮಾಡಲಿರುವ ಪುಸ್ತಕದ 3 ಪ್ರತಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 05, 2026 ಕೊನೆಯ ದಿನಾಂಕವಾಗಿದ್ದು, ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಪುಸ್ತಕಗಳು ಯಾವುದೇ ವಿವಾದಾತ್ಮಕ ಅಂಶಗಳನ್ನು ಹೊಂದಿರಬಾರದು. ಕಾನೂನು ತೊಡಕುಗಳು ಎದುರಾದಲ್ಲಿ ಲೇಖಕರು ಅಥವಾ ಪ್ರಕಾಶಕರೇ ನೇರ ಹೊಣೆಗಾರರಾಗಿರುತ್ತಾರೆ. ಪುಸ್ತಕಗಳ ಆಯ್ಕೆ ಮತ್ತು ತಿರಸ್ಕರಿಸುವ ಅಂತಿಮ ಹಕ್ಕು ಪ್ರಾಧಿಕಾರಕ್ಕಿರುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಯಾವುದೇ ಪ್ರಯಾಣ ಭತ್ಯೆ ಅಥವಾ ಸಂಭಾವನೆ ಇರುವುದಿಲ್ಲ.
ಸ್ವೀಕೃತವಾಗುವ ಪುಸ್ತಕಗಳ ಸಂಖ್ಯೆಗೆ ಅನುಗುಣವಾಗಿ, ಮೇಳ ನಡೆಯುವ ಒಂಬತ್ತು ದಿನಗಳಲ್ಲಿ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿ ಸಂಬಂಧಪಟ್ಟವರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರನ್ನು (ಮೊ: 9448056562) ಸಂಪರ್ಕಿಸಬಹುದು ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

