ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಮೂರನೇ ಬಾರಿ ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ಪ್ರಶಸ್ತಿಯನ್ನು ಪಡೆದು, 2026ರ ಸ್ಕೈಟ್ರಾಕ್ಸ್ ವರ್ಲ್ಡ್ ಏರ್ ಪೋರ್ಟ್ ಅವಾರ್ಡ್ಸ್ ನಲ್ಲಿ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಇದು ಕರ್ನಾಟಕವೇ ಹೆಮ್ಮೆಪಡುವಂತಹ ಸಾಧನೆಯಾಗಿದೆ.
ಇತ್ತೀಚಿಗೆ ಲಂಡನ್‌ನಲ್ಲಿ ನಡೆದ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2026ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಸತತ ಮೂರನೇ ವರ್ಷವೂ ಭಾರತ ಮತ್ತು ದಕ್ಷಿಣ ಏಷ್ಯಾದ ‘ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಎಂಬ ಗೌರವಕ್ಕೆ ಪಾತ್ರವಾಗಿದೆ. ಜೊತೆಗೆ, ಜಾಗತಿಕ ಶ್ರೇಯಾಂಕದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಸ್ಥಾನವು 48ನೇ ಸ್ಥಾನದಿಂದ 41ನೇ ಸ್ಥಾನಕ್ಕೆ ಏರಿಕೆಯಾಗಿದೆ. ಈ ಮೂಲಕ ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಗೊಂಡಿದೆ.
ಈ ಮಹತ್ತರ ಸಾಧನೆಯು ನಮ್ಮ ಸಿಬ್ಬಂದಿ ವರ್ಗ ಮತ್ತು ಸಹಭಾಗಿ ಸಂಸ್ಥೆಗಳ ಅವಿರತ ಶ್ರಮ ಹಾಗೂ ವಿಶ್ವದರ್ಜೆಯ ಪ್ರಯಾಣಿಕ ಅನುಭವವನ್ನು ನೀಡುವಲ್ಲಿ ನಮಗಿರುವ ಬದ್ಧತೆಯ ಪ್ರತಿಫಲವಾಗಿದೆ. ಭವಿಷ್ಯದ ದೃಷ್ಟಿಕೋನದೊಂದಿಗೆ ಸನ್ನದ್ಧರಾಗುತ್ತಿರುವ ನಾವು, ಪ್ರತಿ ಪ್ರಯಾಣಿಕರಿಗೂ ತಡೆರಹಿತ ಹಾಗೂ ಅತ್ಯುತ್ತಮ ಪ್ರಯಾಣದ ಅನುಭವ ನೀಡಲು ಶ್ರಮಿಸುತ್ತಿದ್ದೇವೆ. ಅಷ್ಟೇ ಅಲ್ಲದೆ, ಈ ಭಾಗದ ಪ್ರಮುಖ ವರ್ಗಾವಣೆ ಕೇಂದ್ರವಾಗಿ ನಮ್ಮ ಪಾತ್ರವನ್ನು ಇನ್ನಷ್ಟು ಬಲಪಡಿಸುವತ್ತ ದಿಟ್ಟ ಹೆಜ್ಜೆಯಿರಿಸಿದ್ದೇವೆ. ಈ ಯಶಸ್ಸಿನ ಪಯಣದಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಚಿವ ಎಂ.ಬಿ. ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಜೊತೆಗೆ, ಜಾಗತಿಕ ಶ್ರೇಯಾಂಕದಲ್ಲಿ 48ನೇ ಸ್ಥಾನದಿಂದ 41ನೇ ಸ್ಥಾನಕ್ಕೇರಿರುವುದು, ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರಿನ ಸ್ಥಾನ ಮತ್ತಷ್ಟು ಬಲವಾಗುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿ. ಟರ್ಮಿನಲ್ 2ಗೆ ‘5-ಸ್ಟಾರ್’ರೇಟಿಂಗ್ ದೊರೆತಿರುವುದು ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಈ ಮಹತ್ವದ ಸಾಧನೆಗೆ ಕಾರಣರಾದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಗುಣಮಟ್ಟ ಮತ್ತು ಪ್ರಯಾಣಿಕರ ಅನುಭವದ ಮೇಲಿನ ಬೆಂಗಳೂರಿನ ಬದ್ಧತೆಗೆ ದೊರೆತಿರುವ ಜಾಗತಿಕ ಮಾನ್ಯತೆ, ನಮ್ಮ ನಾಡಿನ ಪ್ರಗತಿ ಮತ್ತೊಮ್ಮೆ ಗಗನಕ್ಕೇರಿದೆಯೆಂಬುದನ್ನು ತೋರಿಸುತ್ತದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

