HomeKarnatakaನನ್ನ ವಿರುದ್ಧವೇ 'ಸ್ಟಿಂಗ್ ಆಪರೇಷನ್' ಮಾಡಲು ಸಂಚು ನಡೆದಿತ್ತು; ಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

ನನ್ನ ವಿರುದ್ಧವೇ ‘ಸ್ಟಿಂಗ್ ಆಪರೇಷನ್’ ಮಾಡಲು ಸಂಚು ನಡೆದಿತ್ತು; ಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ ಎಂಬ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಕೆಲವರು ತಮ್ಮ ಬಳಿ ಜಿಎಸ್‌ಟಿ ಸೇರಿದಂತೆ ವಿವಿಧ ವಿಚಾರಗಳನ್ನು ಚರ್ಚಿಸುವ ನೆಪದಲ್ಲಿ ಬಂದಿದ್ದರು. ತಮ್ಮಿಂದಲೇ ಸ್ಟಿಂಗ್ ಆಪರೇಷನ್ ಆರಂಭಿಸಲು ಪ್ರಯತ್ನಿಸಲಾಗಿತ್ತು ಎಂದು ಹೇಳಿದ್ದಾರೆ.

ಆದರೆ, ಅವರ ಮೇಲೆ ಮೊದಲೇ ಅನುಮಾನ ಬಂದಿದ್ದರಿಂದ ಪೊಲೀಸರ ಮೂಲಕ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾಗಿ ಸಿಎಂ ತಿಳಿಸಿದ್ದಾರೆ. ಈ ಸಂಬಂಧ ಎಲ್ಲಾ ದಾಖಲೆಗಳು ಹಾಗೂ ಫೋಟೋಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಗತ್ಯಬಿದ್ದರೆ ಈ ಫೋಟೋಗಳನ್ನು ಬಿಡುಗಡೆ ಮಾಡುವುದಾಗಿಯೂ ಡಿಕೆಶಿ ಹೇಳಿದ್ದಾರೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಇದಕ್ಕೆ ಯಾರು ಹಣಕಾಸು ಒದಗಿಸುತ್ತಿದ್ದಾರೆ ಮತ್ತು ಇದರ ‘ಪಿತಾಮಹ’ ಯಾರು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ ಎಂದು ಅವರು ಹೇಳಿದ್ದಾರೆ.

‘ಕುಂಬಳಕಾಯಿ ಕಳ್ಳ ಅಂದರೆ ಕೆಲವರು ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ’ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ, ಸುಮಾರು 2000ರ ಆಸುಪಾಸಿನಲ್ಲಿಯೂ ತಮ್ಮ ವಿರುದ್ಧ ಇಂತಹ ಷಡ್ಯಂತ್ರಗಳು ನಡೆದಿದ್ದವು ಎಂದು ಸಿಎಂ ಹೇಳಿದ್ದಾರೆ. ಸುಖಾಸುಮ್ಮನೆ ಟ್ರ್ಯಾಪ್ ಮಾಡಲು ಕೆಲವರು ಬರುತ್ತಾರೆ. ಹೀಗಾಗಿ ಅಧಿಕಾರಿಗಳು ಹಾಗೂ ಸಚಿವರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ್ದೇನೆ ಎಂದಿದ್ದಾರೆ.

ಈ ಷಡ್ಯಂತ್ರದ ಹಿಂದೆ ಕರ್ನಾಟಕದವರಿದ್ದಾರೆಯೇ ಅಥವಾ ಹೊರರಾಜ್ಯದವರಿದ್ದಾರೆಯೇ ಎಂಬುದನ್ನು ಸದ್ಯ ಬಹಿರಂಗಪಡಿಸುವುದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ನಡುವೆ, ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಯುತ್ತಿದೆ ಎಂದು ಡಿಕೆಶಿ ಈ ಹಿಂದೆ ಸಚಿವರಿಗೆ ಎಚ್ಚರಿಕೆ ನೀಡಿದ್ದರು. ಎರಡು ತಂಡಗಳಿಂದ ಸ್ಟಿಂಗ್ ಆಪರೇಷನ್ ನಡೆಯುತ್ತಿದ್ದು, ಸಚಿವರ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ಅವರು ಎಚ್ಚರಿಸಿದ್ದರು.

 NICE ಟೋಲ್ ಸಂಗ್ರಹ ₹4,756.48 ಕೋಟಿ; ಯೋಜನಾ ವೆಚ್ಚಕ್ಕಿಂತಲೂ ಸುಮಾರು 3 ಪಟ್ಟು: ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ರೋಡ್ (NICE) ಯೋಜನೆ 2008ರಿಂದ ₹4,756.48 ಕೋಟಿ ಟೋಲ್ ಸಂಗ್ರಹಿಸಿದೆ. ಆದರೆ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. NICE ರಸ್ತೆಯಲ್ಲಿ ಟೋಲ್ ಸಂಗ್ರಹವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, NICE ಯೋಜನೆಯ ಒಪ್ಪಂದಗಳಿಗೆ ವಿರುದ್ಧವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು. ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನೂ ಅವರು ಉಲ್ಲೇಖಿಸಿದರು. ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿಲ್ಲ ಎಂದರು.

“NICE ರಸ್ತೆಯ ಮೂಲ ಯೋಜನಾ ವೆಚ್ಚ ₹1,583.76 ಕೋಟಿ. ಆದರೆ ಕಂಪನಿಯು ಟೋಲ್ ಮೂಲಕ ₹4,756.48 ಕೋಟಿ ಸಂಗ್ರಹಿಸಿದೆ. ಇದು ಮೂಲ ಯೋಜನಾ ವೆಚ್ಚಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು” ಎಂದು ಕುಮಾರಸ್ವಾಮಿ ಹೇಳಿದರು.

2008-09ರಲ್ಲಿ ₹5.59 ಕೋಟಿ ಇದ್ದ ವಾರ್ಷಿಕ ಟೋಲ್ ಸಂಗ್ರಹ, 2024-25ರಲ್ಲಿ ₹734.97 ಕೋಟಿಗೆ ಏರಿಕೆಯಾಗಿದೆ. 2008ರಿಂದ 2025ರವರೆಗೆ ಒಟ್ಟು ₹4,756.48 ಕೋಟಿ ಟೋಲ್ ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದರು.

ಸೆಪ್ಟೆಂಬರ್ 4, 2000ರಂದು ರಾಜ್ಯ ಲೋಕೋಪಯೋಗಿ ಇಲಾಖೆ ಮತ್ತು NICE ನಡುವೆ ಟೋಲ್ ಕನ್ಸೆಷನ್ ಒಪ್ಪಂದ (TCA) ಮಾಡಿಕೊಂಡಿದ್ದು, ಏಪ್ರಿಲ್ 3, 1997ರ ಫ್ರೇಮ್‌ವರ್ಕ್ ಒಪ್ಪಂದದ (FWA) ಅನ್ವಯ ಯೋಜನೆಯನ್ನು ಜಾರಿಗೊಳಿಸಬೇಕಿತ್ತು ಎಂದು ಕುಮಾರಸ್ವಾಮಿ ಹೇಳಿದರು.

ನಾಲ್ಕು ಪಥದ ಕಾಂಕ್ರೀಟ್ ರಸ್ತೆ, ಸರ್ವಿಸ್ ರಸ್ತೆಗಳು ಹಾಗೂ ನಿರ್ವಹಣಾ ಪ್ರದೇಶಗಳನ್ನು ನಿರ್ಮಿಸಿದ ಬಳಿಕವೇ ಟೋಲ್ ಸಂಗ್ರಹ ಆರಂಭಿಸಬೇಕಿತ್ತು. ಆದರೆ ಈ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸದೇ 2008ರಿಂದ ಟೋಲ್ ಸಂಗ್ರಹ ಆರಂಭಿಸಲಾಗಿದೆ ಎಂದು ಅವರು ಆರೋಪಿಸಿದರು.

NICE ಯೋಜನೆಗಾಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಹಾಗೂ ಕೆಲವು ಕೆರೆ ಪ್ರದೇಶಗಳ ಮೇಲೆಯೂ ರಸ್ತೆ ನಿರ್ಮಿಸಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. 2021ರಲ್ಲಿ ಎಂಜಿನಿಯರ್ ಕಪಿಲ್ ಶರ್ಮಾ ಅವರು ದಿಶಾಂಕ್ ಆ್ಯಪ್ ಬಳಸಿ ಕೆರೆಗಳ ಮೇಲೆ ನಿರ್ಮಿಸಿರುವ ರಸ್ತೆಗಳ ಕುರಿತು ಮಾಹಿತಿ ಸಂಗ್ರಹಿಸಿ ದೂರು ದಾಖಲಿಸಿದ್ದರು ಎಂದು ಅವರು ಹೇಳಿದರು.

ಯೋಜನೆಯ ಭೂಸ್ವಾಧೀನ ಪ್ರಮಾಣವನ್ನು ಕೂಡ ODP ಮೂಲಕ ಬದಲಾಯಿಸಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಪೆರಿಫೆರಲ್ ರಸ್ತೆಗೆ ಮೀಸಲಿದ್ದ 2,193 ಎಕರೆ ಭೂಮಿ 2,747 ಎಕರೆಗೆ ಹಾಗೂ ಟೋಲ್ ರಸ್ತೆಗೆ ಮೀಸಲಿದ್ದ 6,999 ಎಕರೆ 9,468 ಎಕರೆಗೆ ಹೆಚ್ಚಿಸಲಾಗಿದೆ ಎಂದು ದಾಖಲೆಗಳನ್ನು ಉಲ್ಲೇಖಿಸಿ ಹೇಳಿದರು.

ಜುಲೈ 29ರಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಮೂಲ ಒಪ್ಪಂದವನ್ನು ODP ಮೂಲಕ ಬದಲಾಯಿಸಿರುವ ಕ್ರಮವನ್ನು ಪ್ರಶ್ನಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಈ ತೀರ್ಪಿನ ವಿರುದ್ಧ NICE ಸುಪ್ರೀಂ ಕೋರ್ಟ್‌ಗೆ ಎಸ್‌ಎಲ್‌ಪಿ ಸಲ್ಲಿಸಿದ್ದು, ಆದರೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 2ರಂದು ನಡೆಯಲಿದೆ ಎಂದು ಅವರು ಹೇಳಿದರು.

2002ರ ನವೆಂಬರ್ 4ರಂದು ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೂ ಆರು ವರ್ಷಗಳಲ್ಲಿ ನಾಲ್ಕು ಪಥದ ಕಾಂಕ್ರೀಟ್ ರಸ್ತೆ ಪೂರ್ಣಗೊಳ್ಳದಿದ್ದರೆ ಟೋಲ್ ಸಂಗ್ರಹವನ್ನು ಹಿಂಪಡೆಯಬೇಕು ಎಂದು ನಿರ್ಧರಿಸಲಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು.

NICE ಯೋಜನೆಯಡಿ ಭೂ ಮಾರಾಟದಿಂದ ₹384 ಕೋಟಿ, ಜಂಟಿ ಅಭಿವೃದ್ಧಿ ಹಾಗೂ ನಿರ್ಮಾಣ ಯೋಜನೆಗಳ ಮುಂಗಡವಾಗಿ ₹108 ಕೋಟಿ ಮತ್ತು ಕನ್ವೆನ್ಷನ್ ಸೆಂಟರ್‌ಗಳಿಂದ ₹338 ಕೋಟಿ ಆದಾಯ ಗಳಿಸಲಾಗಿದೆ ಎಂದು ಅವರು ಆರೋಪಿಸಿದರು.

ಹೀಗಾಗಿ NICE ರಸ್ತೆಯಲ್ಲಿ ತಕ್ಷಣ ಟೋಲ್ ಸಂಗ್ರಹವನ್ನು ನಿಲ್ಲಿಸಿ, ನ್ಯಾಯಾಲಯದ ವಿಚಾರಣೆ ಮತ್ತು ಮೂಲ ಒಪ್ಪಂದಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular