ಕೋಲಾರ : ಜಿಲ್ಲೆಯ ಕೆಜಿಎಫ್ ನಗರಸಭೆಯ ಪೌರಾಯುಕ್ತರು ಸೇರಿದಂತೆ ಮೂವರು ಅಧಿಕಾರಿಗಳು ಲಂಚದ ಹಣದೊಂದಿಗೆ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದಾಗ, ಲೋಕಾಯುಕ್ತ ಪೊಲೀಸರು ಸುಮಾರು 15 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ ಅವರನ್ನು ಬಂಧಿಸಿರುವ ಸಿನಿಮೀಯ ಘಟನೆ ನಡೆದಿದೆ.
ಕೆಜಿಎಫ್ ನಗರಸಭೆ ಪೌರಾಯುಕ್ತ ಎನ್. ಮುನಿಸ್ವಾಮಿ ಪ್ರಸಾದ್, ಇಂಜಿನಿಯರ್ ಉಮಾಶಂಕರ್ ಮತ್ತು ಬಿಲ್ ಕಲೆಕ್ಟರ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಗುತ್ತಿಗೆದಾರರೊಬ್ಬರ ಬಾಕಿ ಬಿಲ್ ಪಾವತಿಸಲು ಇವರು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಗುತ್ತಿಗೆದಾರರು ಲಂಚ ನೀಡುವ ವೇಳೆ ಲೋಕಾಯುಕ್ತರು ದಾಳಿ ಮಾಡಿದ್ದರು.
ಲೋಕಾಯುಕ್ತ ದಾಳಿಯ ಸುಳಿವು ಸಿಗುತ್ತಿದ್ದಂತೆ ಆರೋಪಿಗಳು ಹಣದೊಂದಿಗೆ ತಮ್ಮ ಕಾರಿನಲ್ಲಿ ವೇಗವಾಗಿ ಪರಾರಿಯಾಗಿದ್ದರು. ಲೋಕಾಯುಕ್ತ ಪೊಲೀಸರು ಬಿಡದೆ ಸುಮಾರು 15 ಕಿ.ಮೀ ದೂರದವರೆಗೆ ಬೆನ್ನಟ್ಟಿ, ಅಂತಿಮವಾಗಿ ಕೋಲಾರ ಸಮೀಪ ಅವರನ್ನು ಸುತ್ತುವರಿದು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯ ನೇತೃತ್ವವನ್ನು ಲೋಕಾಯುಕ್ತ ಎಸ್‌ಪಿ ಉಮೇಶ್ ಮತ್ತು ಡಿವೈಎಸ್‌ಪಿ ನೇತೃತ್ವದ ತಂಡ ವಹಿಸಿತ್ತು. ಆರೋಪಿಗಳಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

