ಬೆಂಗಳೂರು : ಮುಂಬರುವ 2027ರ ಜನಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ 50 ವರ್ಷ ಮೇಲ್ಪಟ್ಟ ಮಹಿಳಾ ಶಿಕ್ಷಕರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ವಯೋಸಹಜ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಇವರನ್ನು ಗಣತಿ ಕಾರ್ಯದಿಂದ ಹೊರಗಿಡುವ ಬಗ್ಗೆ ಸರ್ಕಾರ ಜಿಲ್ಲಾಧಿಕಾರಿಗಳ ಅಭಿಪ್ರಾಯ ಕೇಳಿದೆ.
ಆರೋಗ್ಯದ ದೃಷ್ಟಿಯಿಂದ 50 ವರ್ಷ ದಾಟಿದ ಮಹಿಳಾ ಶಿಕ್ಷಕಿಯರನ್ನು ಜನಗಣತಿ ಕೆಲಸಕ್ಕೆ ನಿಯೋಜಿಸಬಾರದೆಂದು ಮಹಿಳಾ ಶಿಕ್ಷಕರ ಸಂಘವು ಸರ್ಕಾರಕ್ಕೆ ಮನವಿ ಮಾಡಿತ್ತು. ಶಿಕ್ಷಣ ಇಲಾಖೆಯ ಈ ಪ್ರಸ್ತಾವನೆಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಇದನ್ನು ಪರಿಶೀಲಿಸಲು ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳ ನಿರ್ಧಾರ: ಪ್ರತಿ ಜಿಲ್ಲೆಯಲ್ಲಿ ಲಭ್ಯವಿರುವ ಸರ್ಕಾರಿ ಸಿಬ್ಬಂದಿಗಳ ಸಂಖ್ಯೆಯನ್ನು ಆಧರಿಸಿ, ಜನಗಣತಿ ಮತ್ತು SIR (Special Intensive Revision) ಕೆಲಸಗಳಿಗೆ ಯಾವುದೇ ಅಡ್ಡಿಯಾಗದಿದ್ದಲ್ಲಿ ಮಾತ್ರ ಈ ವಿನಾಯಿತಿಯನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಅಂತಿಮ ತೀರ್ಮಾನ: ಒಂದು ವೇಳೆ ಸಿಬ್ಬಂದಿ ಕೊರತೆಯಿಂದ ಜನಗಣತಿ ಕೆಲಸಕ್ಕೆ ತೊಂದರೆಯಾಗುವ ಸಾಧ್ಯತೆಯಿದ್ದರೆ ಈ ಕೋರಿಕೆಯನ್ನು ಪರಿಗಣಿಸದಂತೆ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದು, ತೆಗೆದುಕೊಂಡ ನಿರ್ಧಾರವನ್ನು ಸರ್ಕಾರಕ್ಕೆ ತಿಳಿಸಲು ಸೂಚಿಸಿದ್ದಾರೆ.


