ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಏರ್ಕ್ರಾಫ್ಟ್ ತಳಮಟ್ಟದಲ್ಲಿ ಹಾರಾಟ ನಡೆಸುತ್ತಿದೆ. ಇದರ ವಿಡಿಯೋವನ್ನು ಮಾಡಿ ಜನರು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ತಳಮಟ್ಟದಲ್ಲಿ ಚಿಕ್ಕ ವಿಮಾನಗಳ ಹಾರಾಟ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಆದ್ದರಿಂದ ಈಗ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜೀಯೋಲಜಿಕಲ್ ಸರ್ವೇ ಆಫ್ ಇಂಡಿಯಾ ವತಿಯಿಂದ ದಿನಾಂಕ 3107/2026ರ ತನಕ ಏರ್ಕ್ರಾಫ್ಟ್ ಮೂಲಕ ಜಿಯೋಫಿಸಿಕಲ್ ಸರ್ವೆ ಕಾರ್ಯ ನಡೆಯುತ್ತಿದೆ.
ಈ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ಮಂಗಳೂರು, ಚಿಕ್ಕಮಗಳೂರು, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಏರ್ಕ್ರಾಫ್ಟ್ ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿದೆ. ಆದ್ದರಿಂದ ಈ ಕುರಿತು ಯಾವುದೇ ಭಯ ಬೇಡ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು ಹಾಗೂ ಹಾವೇರಿ ತಾಲೂಕಿನಲ್ಲಿ ಭೂಮೇಲ್ಮೈ ಇಂದ ಕಡಿಮೆ ಅಂತರದಲ್ಲಿ ಏರ್ಕ್ರಾಫ್ಟ್ ಹಾರಾಟ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.
ಇದು ಕೇವಲ ಜಿಯೋಫಿಸಿಕಲ್ ಸರ್ವೆ ಕಾರ್ಯಕ್ಕೆ ಸೀಮಿತವಾಗಿರುವುದರಿಂದ ಸಾರ್ವಜನಿಕರು ಭಯ/ ಆತಂಕ ಪಡಬಾರದೆಂದು ಜನರಿಗೆ ಮನವಿ ಮಾಡಲಾಗಿದೆ.
ಅಧಿಕಾರಿಗಳ ಸ್ಪಷ್ಟನೆ: ಸರ್ವೇ ಬಗ್ಗೆ ಅಧಿಕಾರಿಗಳು ಮಾತನಾಡಿ, ಈ ಕಡಿಮೆ ಎತ್ತರದಲ್ಲಿನ ಏರ್ಕ್ರಾಫ್ಟ್ ಹಾರಾಟವು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ಪರವಾಗಿ ನಡೆಸಲಾಗುತ್ತಿರುವ ವೈಮಾನಿಕ ಭೂಭೌತ ಸಮೀಕ್ಷೆಗೆ ಸಂಬಂಧಿಸಿದೆ.
ಸ್ಪಷ್ಟ ಭೂವೈಜ್ಞಾನಿಕ ಸಾಮರ್ಥ್ಯ (OGP) ಎಂದು ವರ್ಗೀಕರಿಸಲಾದ ಪ್ರದೇಶಗಳಲ್ಲಿ ಸಂಭಾವ್ಯ ಖನಿಜ ನಿಕ್ಷೇಪಗಳನ್ನು ಗುರುತಿಸಲು, ಎಕ್ಸ್ಕ್ಯಾಲಿಬರ್ ಮೆಕ್ಫಾರ್ ಪ್ರೈವೇಟ್ ಲಿಮಿಟೆಡ್ ನಿಯೋಜಿಸಿರುವ ಸೆಸ್ನಾ ಕ್ಯಾರವಾನ್ 208B ವಿಮಾನವನ್ನು ಬಳಸಿಕೊಂಡು ಈ ಯೋಜನೆಯನ್ನು ಕೈಗೊಳ್ಳಲಾಗಿದೆ.
ಈ ಮಲ್ಟಿ-ಸೆನ್ಸರ್ ವೈಮಾನಿಕ ಭೂಭೌತ ಸಮೀಕ್ಷೆಯು ಮ್ಯಾಗ್ನೆಟಿಕ್ ಗ್ರೇಡಿಯೊಮೀಟರ್ಗಳು ಮತ್ತು ರೇಡಿಯೊಮೀಟರ್ ಸೆನ್ಸರ್ಗಳನ್ನು ಒಳಗೊಂಡಿದೆ. ಇದರ ಪರಿಣಾಮವಾಗಿ, ನಿಖರವಾದ ಡೇಟಾವನ್ನು ಪಡೆಯಲು ವಿಮಾನವು ಕಡಿಮೆ ಎತ್ತರದಲ್ಲಿ ಹಾರಬೇಕಾಗುತ್ತದೆ.
ಹಿಮಾಲಯನ್ ಹೆಲಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ವೆಟ್ ಲೀಸ್ ಒಪ್ಪಂದದ ಅಡಿಯಲ್ಲಿ ಎಕ್ಸ್ಕ್ಯಾಲಿಬರ್ ಏವಿಯೇಷನ್ (ಆಸ್ಟ್ರೇಲಿಯಾ) ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿರುವ ವಿದೇಶಿ ನೋಂದಾಯಿತ ವಿಮಾನವನ್ನು ಬಳಸುತ್ತಿದೆ. ಈ ಕಾರ್ಯಾಚರಣೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದೆ.
ಈ ಸಮೀಕ್ಷೆಯ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲು ಎರಡು ವಿಮಾನಗಳನ್ನು ಬಳಸಲಾಗುತ್ತಿದೆ. ಈ ಕಾರ್ಯಾಚರಣೆಗಳು ಜುಲೈ 31 ರವರೆಗೆ ಮುಂದುವರಿಯಲಿದ್ದು, ಮಂಗಳೂರು ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಗಳು ಮೂಲ ನಿಲ್ದಾಣಗಳಾಗಿ ಕಾರ್ಯನಿರ್ವಹಿಸಲಿವೆ.

