ರಾಮನಗರ: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕುಖ್ಯಾತ ಕಳ್ಳಿ ಮಾಲಾ ಪೊಲೀಸ್ ಕಸ್ಟಡಿಯಿಂದಲೇ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ನಡೆದಿದೆ.
ರಾಮನಗರದ ಜಿಲ್ಲಾಸ್ಪತ್ರೆಯ ಸಖಿ ಕೇಂದ್ರದಿಂದ ಕುಖ್ಯಾತ ಕಳ್ಳಿ ಮಾಲಾ ಪರಾರಿಯಾಗಿದ್ದಾಳೆ. ಹಲವು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ ಮಾಲಾ ಈಗ ಪೊಲೀಸರ ಕೈಗೆ ಸಿಕ್ಕಿದ್ದಳು, ವಿಚಾರಣೆ ವೇಳೆಯೇ ಮತ್ತೆ ಎಸ್ಕೇಪ್ ಆಗಿದ್ದಾಳೆ.
ಆಂಧ್ರಪ್ರದೇಶದ ಕುಪ್ಪಂ ಮೂಲದ ಮಾಲಾಳಿಗಾಗಿ ಪೊಲೀಸರು ಶೋಧಕಾರ್ಯ ತೀವ್ರಗೊಳಿಸಿದ್ದಾರೆ. ಮಾಲಾ ಪರಾರಿ ಸಂಬಂಧ ರಾಮನಗರ ಟೌನ್ ಠಾಣೆಯಲ್ಲಿ ಕೇಸ್ ದಾಲಾಗಿದೆ.
ಮಾಲಾ ಕಳೆದ ಹದಿನಾರು ವರ್ಷಗಳಿಂದ ವಿವಿಧ ಕಡೆಗಳಲ್ಲಿ ಕಳ್ಳತನ ಎಸಗಿ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಇತ್ತೀಚೆಗೆ ಮಾಗಡಿ ಪಟ್ಟಣದಲ್ಲಿ ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಸುಮಾರು 350 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ಮಾಗಡಿ ಠಾಣೆ ಪೊಲೀಸರು ಮಾಲಾಳನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು.
ಬಳಿಕ ಆರೋಪಿಯನ್ನು ರಾಮನಗರದ ಜಿಲ್ಲಾಸ್ಪತ್ರೆಯಲ್ಲಿರುವ ಸಖಿ ಕೇಂದ್ರದಲ್ಲಿ ತಡರಾತ್ರಿ ಇರಿಸಲಾಗಿತ್ತು. ಆದರೆ ಇದೇ ವೇಳೆ ಪೊಲೀಸರ ಗಮನವನ್ನು ಬೇರೆಡೆ ಸೆಳೆದು, ಮಾಲಾ ಅಲ್ಲಿಂದ ಪರಾರಿಯಾಗಿದ್ದಾಳೆ. ಇನ್ನು ಆರೋಪಿ ಮಾಲಾಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

