HomeKarnatakaಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ: ಸಿದ್ಧರಾಮಯ್ಯ

ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ: ಸಿದ್ಧರಾಮಯ್ಯ

ಬೆಂಗಳೂರು: ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ “96ನೇ ಜನ್ಮ ದಿನಾಚರಣೆ” ಹಾಗೂ “ಚುನಾವಣೆ ಸುಧಾರಣೆಯಿಂದ ಸಮಾಜದ ಸುಧಾರಣೆ” ಕುರಿತಾದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜಕೀಯ ಬದುಕಿನ‌ ಅನುಭವ, ಪಟೇಲರ ಜೊತೆಗಿನ ಒಡನಾಟ ಮತ್ತು ಚುನಾವಣಾ ಸುಧಾರಣೆಯ ಅಗತ್ಯತೆಯ ಕುರಿತ ನನ್ನ ಅಭಿಪ್ರಾಯಗಳನ್ನು ಹಂಚಿಕೊಂಡರು.

ಇಂದು ಚುನಾವಣೆಯಲ್ಲಿ ಹಣ, ಜಾತಿ ಮತ್ತು ಮದ್ಯದ ಪ್ರಭಾವ ಹೆಚ್ಚಾಗಿದ್ದು, ಪ್ರಾಮಾಣಿಕರು, ಬಡವರು, ಬುದ್ಧಿವಂತರು ಹಾಗೂ ಸಮಾಜ ಸೇವೆಯ ಆಶಯ ಹೊಂದಿರುವವರು ರಾಜಕೀಯ ಪ್ರವೇಶಿಸುವುದೇ ಕಷ್ಟವಾಗುತ್ತಿದೆ. ಇದು ನಮ್ಮ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಗಂಭೀರವಾಗಿ ಚರ್ಚಿಸಬೇಕಾದ ವಿಚಾರ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚುನಾವಣಾ ಸುಧಾರಣೆ ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ ವಿಚಾರವಲ್ಲ. ಇದು ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳು, ಸಾರ್ವಜನಿಕರು, ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಈ ಕುರಿತು ಚರ್ಚೆ ನಡೆಸಬೇಕು ಎಂದು ಹೇಳಿದ್ದಾರೆ.

ಇಂದಿನ ಚುನಾವಣಾ ವ್ಯವಸ್ಥೆ ರಾಜಕಾರಣಿಗಳನ್ನೇ ಅನಿವಾರ್ಯವಾಗಿ ಭ್ರಷ್ಟರಾಗುವಂತಹ ಪರಿಸ್ಥಿತಿಗೆ ತಳ್ಳುತ್ತಿದೆ. ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೆ ಮಾತ್ರ ಖರ್ಚು ಮಾಡಿ ಚುನಾವಣೆ ಎದುರಿಸುತ್ತೇವೆ ಎಂದು ರಾಜಕಾರಣಿಗಳು ಹೇಳಿದರೆ ಅದನ್ನು ಜನರು ನಂಬುವ ಸ್ಥಿತಿಯೂ ಇಲ್ಲ. ವಾಸ್ತವದಲ್ಲಿ ಚುನಾವಣೆ ನಡೆಸಲು ನಿಗದಿತ ಮಿತಿಗಿಂತ ಹೆಚ್ಚಿನ ಹಣ ಖರ್ಚಾಗುತ್ತಿದೆ. ನಾನು 1983ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಜಾರ್ಜ್ ಫರ್ನಾಂಡಿಸ್ ಅವರು 10 ಸಾವಿರ ರೂಪಾಯಿ ನೀಡಿದ್ದರು. ಹಳ್ಳಿಗಳಿಗೆ ಹೋದಾಗ ಜನರೇ 200, 500 ರೂಪಾಯಿಯಂತೆ ಚುನಾವಣೆಗೆ ಹಣ ನೀಡುತ್ತಿದ್ದರು. ಸುಮಾರು 63 ಸಾವಿರ ರೂಪಾಯಿಯಲ್ಲಿ ಆ ಚುನಾವಣೆಯನ್ನು ಮುಗಿಸಿದ್ದೆ. ಆಗ ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದೆ ಎಂದರು.

1980ರಲ್ಲಿ ಲೋಕದಳದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿಯೂ ಹೆಚ್ಚಿನ ಹಣ ಇರಲಿಲ್ಲ. ಚೌಧರಿ ಚರಣ್ ಸಿಂಗ್ ಅವರು ಒಂದು ಲಕ್ಷ ರೂಪಾಯಿ ಕಳುಹಿಸಿದ್ದರು. ಆ ಹಣ ಮುಗಿದ ನಂತರ ಜನರಿಗೆ ಟೀ ಕೊಡಿಸಲೂ ಹಣವಿಲ್ಲದಂತಹ ಪರಿಸ್ಥಿತಿ ಇತ್ತು. ಆದರೂ ಚುನಾವಣೆ ನಡೆಸಲು ಸಾಧ್ಯವಾಗುತ್ತಿತ್ತು. ಆದರೆ ನಂತರದ ವರ್ಷಗಳಲ್ಲಿ ಚುನಾವಣಾ ವ್ಯವಸ್ಥೆಯೇ ಸಂಪೂರ್ಣ ಬದಲಾಗಿದೆ ಎಂದರು.

2006ರ ಚಾಮುಂಡೇಶ್ವರಿ ಉಪಚುನಾವಣೆಯ ವೇಳೆಗೆ ಪರಿಸ್ಥಿತಿ ಬಹಳಷ್ಟು ಬದಲಾಗಿತ್ತು. ಎದುರಾಳಿ ಅಭ್ಯರ್ಥಿಯ ಪರವಾಗಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಲಾಗುತ್ತಿತ್ತು. ಅದಕ್ಕೆ ಪ್ರತಿಯಾಗಿ ನಾನೂ ಹಣ ಖರ್ಚು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತು. ಅಲ್ಲಿಂದೀಚೆಗೆ ಚುನಾವಣೆಯಲ್ಲಿ ಹಣದ ಪ್ರಭಾವ ಮತ್ತಷ್ಟು ಹೆಚ್ಚಾಗಿದೆ ಎಂದರು.

ಇಂದು ಹಣವಿಲ್ಲದೆ, ಮದ್ಯ ಹಂಚದೆ ಮತ್ತು ಜಾತಿಯ ಲೆಕ್ಕಾಚಾರ ಮಾಡದೆ ಚುನಾವಣೆ ಗೆಲ್ಲುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆಯಿಂದ ಸಮಾಜದಲ್ಲಿರುವ ಪ್ರಾಮಾಣಿಕರು, ಬಡವರು, ಬುದ್ಧಿವಂತರು ಮತ್ತು ಸಮಾಜ ಸೇವೆ ಮಾಡಬೇಕೆಂಬ ಉದ್ದೇಶ ಹೊಂದಿರುವವರು ಚುನಾವಣಾ ರಾಜಕಾರಣದಿಂದ ದೂರ ಉಳಿಯುವಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಈ ಹಿಂದೆಯೂ ಹಲವು ಪ್ರಯತ್ನಗಳು ನಡೆದಿವೆ. ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದಿನೇಶ್ ಗೋಸ್ವಾಮಿ ಸಮಿತಿ, ಪಿ.ವಿ. ನರಸಿಂಹರಾವ್ ಅವರ ಅವಧಿಯಲ್ಲಿ ಎನ್.ಎನ್. ವೋಹ್ರಾ ಸಮಿತಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಇಂದ್ರಜಿತ್ ಗುಪ್ತಾ ಸಮಿತಿ ರಚಿಸಲಾಗಿತ್ತು. ಈ ಸಮಿತಿಗಳ ಶಿಫಾರಸುಗಳನ್ನು ಸಮಗ್ರವಾಗಿ ಜಾರಿಗೆ ತಂದಿದ್ದರೆ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಬಹುದಾಗಿತ್ತು. ಆದರೆ ಶಿಫಾರಸುಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಂದ್ರಜಿತ್ ಗುಪ್ತಾ ಸಮಿತಿ ಪ್ರಸ್ತಾಪಿಸಿದ್ದ ಮಾದರಿಯಲ್ಲಿ ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ತರುವ ಕುರಿತು ಗಂಭೀರವಾಗಿ ಚಿಂತಿಸಬೇಕು. ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದರ ಜೊತೆಗೆ ರಾಜಕೀಯ ಪಕ್ಷಗಳ ನೀತಿ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಮಾಧ್ಯಮಗಳ ಮೂಲಕ ಮತದಾರರಿಗೆ ತಲುಪಿಸುವ ವ್ಯವಸ್ಥೆ ರೂಪಿಸಬೇಕು. ಇದರಿಂದ ಚುನಾವಣೆಯಲ್ಲಿ ಹಣದ ದುರ್ಬಳಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.

ಚುನಾವಣೆಗಳು ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು. ಅದಕ್ಕಾಗಿ ಕೇವಲ ಕಾನೂನು ಅಥವಾ ಚುನಾವಣಾ ಆಯೋಗದ ಮಟ್ಟದಲ್ಲಿ ಬದಲಾವಣೆ ಮಾಡಿದರೆ ಸಾಲದು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಮತದಾರರ ಮನೋಭಾವದಲ್ಲಿಯೂ ಬದಲಾವಣೆ ಆಗಬೇಕು ಎಂದರು.

ರಾಜಕಾರಣಿಗಳು ಅಧಿಕಾರದಲ್ಲಿದ್ದಾಗ ಹಣ ಮಾಡುತ್ತಾರೆ ಎಂದು ಆರೋಪಿಸುವವರೇ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ನೀಡುವ ಹಣವನ್ನು ಸ್ವೀಕರಿಸುವ ಮನೋಭಾವ ಹೊಂದಿರುವುದು ಸರಿಯಲ್ಲ. ಹಣ ಕೊಟ್ಟರೆ ತೆಗೆದುಕೊಳ್ಳೋಣ ಎಂಬ ಮತದಾರರ ಮನೋಭಾವವೂ ಬದಲಾಗಬೇಕು. ಚುನಾವಣಾ ವ್ಯವಸ್ಥೆಯ ಸುಧಾರಣೆಯ ಜೊತೆಗೆ ಮತದಾರರಲ್ಲಿಯೂ ಪ್ರಜಾಸತ್ತಾತ್ಮಕ ಜಾಗೃತಿ ಮತ್ತು ವೈಚಾರಿಕತೆ ಬೆಳೆಯಬೇಕು ಎಂದರು.

ಶಿಕ್ಷಣದ ಪ್ರಮಾಣ ಹೆಚ್ಚಾಗಿದ್ದರೂ ಸಮಾಜದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಅದೇ ಪ್ರಮಾಣದಲ್ಲಿ ಬೆಳೆದಿಲ್ಲ. ಓದಿಕೊಂಡವರಲ್ಲಿಯೂ ಜಾತಿ ಆಧಾರಿತ ಚಿಂತನೆ ಮುಂದುವರಿದಿದೆ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಯ ಅರ್ಹತೆ, ನೀತಿ ಮತ್ತು ಕಾರ್ಯಕ್ರಮಗಳಿಗಿಂತ ಜಾತಿ ಯಾವುದು ಎಂಬ ಪ್ರಶ್ನೆಗೆ ಆದ್ಯತೆ ಸಿಗುತ್ತಿರುವುದು ಬದಲಾಗಬೇಕು. ಶಿಕ್ಷಣ ವ್ಯವಸ್ಥೆಯೂ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವಂತಿರಬೇಕು ಎಂದು ಹೇಳಿದರು.

ರಾಜಕೀಯ ಪ್ರಜಾಪ್ರಭುತ್ವದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯೂ ಮುಖ್ಯ. ಸಮಾಜದಲ್ಲಿ ಅಸಮಾನತೆ, ಜಾತೀಯತೆ ಮತ್ತು ಅಸ್ಪೃಶ್ಯತೆ ಮುಂದುವರಿದಿರುವಾಗ ಪ್ರಜಾಪ್ರಭುತ್ವದ ಆಶಯ ಸಂಪೂರ್ಣವಾಗಿ ಸಾಕಾರಗೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಚುನಾವಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸುವುದೂ ಸಾಮಾಜಿಕ ಬದಲಾವಣೆಯ ಪ್ರಮುಖ ಭಾಗವಾಗಿದೆ ಎಂದರು.

ಎಲ್ಲ ರಾಜಕೀಯ ಪಕ್ಷಗಳ ಸಿದ್ಧಾಂತ, ನೀತಿ ಮತ್ತು ಕಾರ್ಯಕ್ರಮಗಳು ಬೇರೆ ಬೇರೆಯಾಗಿರಬಹುದು. ಆದರೆ ಚುನಾವಣಾ ವ್ಯವಸ್ಥೆಯ ಸುಧಾರಣೆಯ ವಿಚಾರದಲ್ಲಿ ಎಲ್ಲರೂ ಮುಕ್ತ ಮನಸ್ಸಿನಿಂದ ಹಾಗೂ ಪ್ರಾಮಾಣಿಕವಾಗಿ ಚರ್ಚಿಸಬೇಕು. ಕೆಲವರು ಮಾತ್ರ ಧ್ವನಿ ಎತ್ತುವುದರಿಂದ ಸಮಗ್ರ ಬದಲಾವಣೆ ಸಾಧ್ಯವಿಲ್ಲ. ಸಾರ್ವಜನಿಕ ವಲಯದಲ್ಲಿ ನಿರಂತರ ಚರ್ಚೆ ನಡೆದು, ಅದರಿಂದ ಸುಧಾರಣೆಯ ಸ್ಪಷ್ಟ ಕ್ರಮಗಳು ಹೊರಬರಬೇಕು ಎಂದರು.

ಜೆ.ಹೆಚ್. ಪಟೇಲ್ ಅವರ ಸ್ಮರಣೆ

ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರನ್ನು ಸ್ಮರಿಸಿದ ಸಿದ್ಧರಾಮಯ್ಯ, ಪಟೇಲರು ಸರಳ, ಧೈರ್ಯಶಾಲಿ, ನೇರ ನಡೆ-ನುಡಿಯ ಹಾಗೂ ಉತ್ತಮ ಸಂಸದೀಯ ಪಟುವಾಗಿದ್ದರು. ಬೇರೆಯವರ ಏಳಿಗೆಯನ್ನು ಕಂಡು ಅಸೂಯೆ ಪಡದೆ ಪ್ರೋತ್ಸಾಹಿಸುತ್ತಿದ್ದರು. ನನ್ನ ರಾಜಕೀಯ ಜೀವನದ ಆರಂಭಿಕ ದಿನಗಳಲ್ಲಿಯೂ ಪಟೇಲರು ನನಗೆ ಪ್ರೋತ್ಸಾಹ ನೀಡಿದ್ದರು ಎಂದರು.

ಜೆ.ಹೆಚ್. ಪಟೇಲರಂತಹ ಓದಿಕೊಂಡ, ಚಳವಳಿಯ ಹಿನ್ನೆಲೆ ಹೊಂದಿದ ಹಾಗೂ ವಿಧಾನಮಂಡಲದಲ್ಲಿ ಗಂಭೀರ ಚರ್ಚೆ ನಡೆಸಬಲ್ಲ ರಾಜಕಾರಣಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಂಸತ್ತು, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಗುಣಮಟ್ಟದ ಚರ್ಚೆಗಳು ಹೆಚ್ಚಾಗಬೇಕು. ಪಟೇಲರು ತೋರಿದ ಆದರ್ಶಗಳು ಮತ್ತು ಸಾರ್ವಜನಿಕ ಬದುಕಿನ ಮೌಲ್ಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದರು.

ಚುನಾವಣಾ ವ್ಯವಸ್ಥೆಯ ಸುಧಾರಣೆ ಕೇವಲ ರಾಜಕಾರಣದ ಸುಧಾರಣೆಯಲ್ಲ. ಅದು ಸಮಾಜದ ಸುಧಾರಣೆಗೂ ಅಗತ್ಯವಾಗಿದೆ. ಹಣ, ಜಾತಿ ಮತ್ತು ಇತರ ಆಮಿಷಗಳ ಪ್ರಭಾವದಿಂದ ಚುನಾವಣೆಯನ್ನು ಮುಕ್ತಗೊಳಿಸಿ, ಪ್ರಾಮಾಣಿಕರು ಹಾಗೂ ಜನಪರ ಕಾಳಜಿ ಹೊಂದಿರುವವರು ರಾಜಕೀಯಕ್ಕೆ ಬರುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು. ಅದಕ್ಕಾಗಿ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಚರ್ಚಿಸಿ ಸುಧಾರಣೆಯ ದಿಕ್ಕಿನಲ್ಲಿ ಸಾಗಬೇಕು ಎಂದರು.

ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ, ಬಿ.ಸೋಮಶೇಖರ್, ಶಾಸಕರಾದ ಗಣೇಶ್ ಪ್ರಸಾದ್, ಸಮಾಜ ಸೇವಕರಾದ ತೇಜಸ್ವಿನಿ ಅನಂತಕುಮಾರ್, ರೈತ ಪರ ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ, ಮಾಜಿ ಶಾಸಕರಾದ ಶಿವಶಂಕರ್, ನಂಜಯ್ಯನ ಮಠ, ಡಾ.ಎಂ.ಪಿ. ನಾಡಗೌಡ, ಪಟೇಲರ ಪುತ್ರರಾದ ಮಹಿಮಾ ಪಟೇಲ್, ತ್ರಿಶೂಲ್ ಪಟೇಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular