ಬೆಂಗಳೂರು: ಗೃಹ ಬಳಕೆಯ ಎಲ್ಪಿಜಿ ಪೂರೈಕೆಯಲ್ಲಿ ಸಮಸ್ಯೆ ಇಲ್ಲ. ವಾಣಿಜ್ಯ ಎಲ್ಪಿಜಿ ಸರಬರಾಜಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಿದೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಭರವಸೆ ನೀಡಿದ್ದಾರೆ.
ಸಚಿವ ಕೆ.ಹೆಚ್. ಮುನಿಯಪ್ಪ ನೇತೃತ್ವದಲ್ಲಿಂದು ಆಹಾರ ಭವನದಲ್ಲಿ IOC ,BPC, HPC, GAIL ನ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇರಾನ್ – ಇಸ್ರೇಲ್ ದೇಶಗಳ ಮಧ್ಯೆ ಯುದ್ದ ನಡೆಯುತ್ತಿದ್ದು, ಅರಬ್ ರಾಷ್ಟ್ರಗಳಾದ ಯುಎಸ್ಎ, ಗಲ್ಪ್ , ರಷ್ಯಾದಿಂದ ನಮ್ಮ ದೇಶಕ್ಕೆ ಅನಿಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ದದ ಕಾರಣದಿಂದ ಅನಿಲದ ಶಿಪ್ಗಳಿಗೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ನಮಗೆ ಅನಿಲ ಸಮಸ್ಯೆ ಉಂಟಾಗಿದೆ. ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದರು.
ಸಾಮಾನ್ಯವಾಗಿ ಜನರು ಉಪಯೋಗಿಸುವ ಡೊಮೆಸ್ಟಿಕ್ ಗ್ಯಾಸ್ ಮತ್ತು ಕಮರ್ಷಿಯಲ್ ಗ್ಯಾಸ್ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಸುಮಾರು 1000 ಮೆಟ್ರಿಕ್ ಟನ್ ಅಂದ್ರೆ ಒಂದು ದಿನಕ್ಕೆ ಸುಮಾರು 50,000 ಕಮರ್ಷಿಯಲ್ ಸಿಲಿಂಡರ್ಸ್ (19 kg) ಬೇಕಾಗುತ್ತದೆ. ಡೊಮೆಸ್ಟಿಕ್ ಬಳಕೆಗೆ ಸುಮಾರು 5,000 ಮೆಟ್ರಿಕ್ ಟನ್ ಅಂದ್ರೆ ದಿನಕ್ಕೆ ಸುಮಾರು 3,50,000 ಸಿಲಿಂಡರ್ಸ್ (14.2 kg) ಬೇಕಾಗುತ್ತದೆ. ಇದು ಕರ್ನಾಟಕ ರಾಜ್ಯದ ನಿತ್ಯದ ಅವಶ್ಯಕತೆಯಾಗಿದೆ. ಭಾರತದಲ್ಲಿ ಸುಮಾರು 30% ಮಾತ್ರ ಉತ್ಪಾದನೆ ಇದೆ. ಉಳಿದ ಶೇ. 60 ರಿಂದ 70ರಷ್ಟು ನಾವು ಆಮದು ಮಾಡಿಕೊಳ್ಳುತ್ತೇವೆ. ಅಮೆರಿಕ, ಗಲ್ಬ್ ಅರೇಬಿಯನ್ ಮತ್ತು ರಷ್ಯಾ ದೇಶಗಳಿಂದ ಆಮದು ಬರುತ್ತಿದೆ. ಈಗ ಯುದ್ಧದ ಪರಿಸ್ಥಿತಿಯಿಂದ ಶಿಪ್ ಗಳು ಬರೋದು ಸ್ವಲ್ಪ ತಡವಾಗುತ್ತಿದೆ. ಆದರೂ ಜನರು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸೂಚನೆಯಂತೆ ಒಂದು ಕುಟುಂಬದ ಬಳಕೆಗೆ 25 ದಿನಕ್ಕೆ ಒಂದು ಸಿಲಿಂಡರ್ ನೀಡಲಾಗುತ್ತದೆ. ಹಳ್ಳಿಗಳಾಗಲಿ, ನಗರದಲ್ಲಿರಲಿ ಜನರು ಮಿತವಾಗಿ ಗ್ಯಾಸ್ ಉಪಯೋಗಿಸಬೇಕು. ತೀರಾ ಅವಶ್ಯಕತೆಗೆ ಮಾತ್ರ ಬಳಸಬೇಕು. ಆತಂಕಪಟ್ಟು ಗ್ರಾಹಕರು ಹೆಚ್ಚು ಹೆಚ್ಚು ಸಿಲಿಂಡರ್ ಬುಕ್ ಮಾಡಬಾರದು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಆಯಿಲ್ ಕಂಪನಿಗಳ ಜೊತೆ ಸಹಕರಿಸಬೇಕು ಎಂದು ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದರು.
ಕಮರ್ಷಿಯಲ್ ಬಳಕೆಯಲ್ಲಿ ಸ್ವಲ್ಪ ಕಷ್ಟವಾಗಬಹುದು. ಮೊದಲು ಮನೆ ಬಳಕೆಗೆ ಆದ್ಯತೆ ನೀಡುತ್ತೇವೆ. ಕಮರ್ಷಿಯಲ್ ಸಿಲಿಂಡರ್ ವಿಚಾರದಲ್ಲಿ ಅತ್ಯಂತ ಹೆಚ್ಚು ಆದ್ಯತೆ ಮೇರೆಗೆ ಆಸ್ಪತ್ರೆ, ಶಾಲೆ, ಕಾಲೇಜುಗಳಿಗೆ ಸರಬರಾಜುನಲ್ಲಿ ವ್ಯತ್ಯಯ ಆಗದಂತೆ ನೋಡಿಕೊಂಡು ನಂತರ ಹೋಟೆಲ್, ಕಲ್ಯಾಣ ಮಂಟಪಗಳಿಗೆ ಆದ್ಯತೆಯ ಮೇರೆಗೆ ಸಿಲಿಂಡರ್ ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

