ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡವರ ವಿರುದ್ಧ ಕೋರ್ಟ್ ಕಾನೂನು ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದೆ.
ಕೊಲೆ ಪ್ರಕರಣದ 14ನೇ ಆರೋಪಿಯಾದ ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಘಟನೆ ನಡೆದ ದಿನ ನಡೆದಿದ್ದನ್ನೆಲ್ಲ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಆದರೆ ಆತನ ಸಾಕ್ಷಿ ಹೇಳಿಕೆಯ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈರಲ್ ಆಗಿರುವ ವಿಡಿಯೋಗಳಲ್ಲಿ ಪ್ರದೋಶ್ ಸಾಕ್ಷಿ ನುಡಿಯುತ್ತಿರುವುದು ದರ್ಶನ್ ಹಾಗೂ ಇತರೆ ಆರೋಪಿಗಳು ಸಹ ಇರುವುದು ತಿಳಿಯುತ್ತಿದೆ.
ವಿಡಿಯೋ ಲೀಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ನೇರವಾಗಿ ನೋಟಿಸ್ ಜಾರಿ ಮಾಡಿದೆ.
ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಈ ನೋಟಿಸ್ ನೀಡಲಾಗಿದೆ. ಇದುವರೆಗೂ ಇಂತಹ ಪ್ರಕರಣಗಳಲ್ಲಿ ಪೊಲೀಸರೇ ಖುದ್ದು ಪತ್ರ ಬರೆದು ಖಾತೆಗಳ ವಿವರ ಪಡೆದು ವಿಡಿಯೋ ಡಿಲೀಟ್ ಮಾಡುವಂತೆ ಸೂಚಿಸುತ್ತಿದ್ದರು. ಆದರೆ, ಈ ಬಾರಿ ನ್ಯಾಯಾಲಯವೇ ನೇರವಾಗಿ ಮಧ್ಯಪ್ರವೇಶಿಸಿ ನೋಟಿಸ್ ಜಾರಿ ಮಾಡಿದೆ.
ನ್ಯಾಯಾಲಯದ ನೋಟಿಸ್ ಬೆನ್ನಲ್ಲೇ ಎಚ್ಚೆತ್ತಿರುವ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಮತ್ತು ನಿರ್ವಾಹಕರು, ಜಾಲತಾಣದಲ್ಲಿದ್ದ ಕೋರ್ಟ್ ವಿಚಾರಣೆಗೆ ಸಂಬಂಧಿಸಿದ ಎಲ್ಲಾ ವಿಡಿಯೋ ಹಾಗೂ ಫೋಟೋಗಳನ್ನು ತಕ್ಷಣವೇ ಡಿಲೀಟ್ ಮಾಡಿದ್ದಾರೆ. ನ್ಯಾಯಾಲಯದ ವಿಚಾರಣೆಯ ದೃಶ್ಯಗಳು, ಆಡಿಯೋ ಮತ್ತು ವೀಡಿಯೋ ರೆಕಾರ್ಡಿಂಗ್ಗಳನ್ನು ಎಲ್ಲೂ ಮರುಪ್ರಸಾರ ಮಾಡಬಾರದು ಅಥವಾ ಹಂಚಿಕೆ ಮಾಡಬಾರದು ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ವಿಚಾರಣೆಯ ಗೌಪ್ಯತೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾಮಾಜಿಕ ಜಾಲತಾಣಗಳಿಗೆ ಕಠಿಣ ನಿರ್ದೇಶನ ನೀಡಲಾಗಿದೆ. ಇನ್ನುಮುಂದೆಯೂ ಯಾರಾದರೂ ಕೋರ್ಟ್ ಕಲಾಪದ ಲೈವ್ ಪ್ರೊಸೀಡಿಂಗ್ಸ್ ರೆಕಾರ್ಡ್ ಮಾಡಿ ಹಂಚಿಕೊಂಡರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್ ಎಚ್ಚರಿಸಿದೆ.
ಅಲ್ಲದೆ, ಇಂತಹವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆಯೂ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಎಲ್ಲಾ ಕಾನೂನು ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಪೊಲೀಸ್ ಕಮಾಂಡ್ ಸೆಂಟರ್ ಸಂಪೂರ್ಣವಾಗಿ ಸಜ್ಜಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ಕಣ್ಣಿಟ್ಟಿದೆ. ನ್ಯಾಯಾಂಗದ ಗೌರವ ಮತ್ತು ತನಿಖೆಯ ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಶ್ ಸಾಕ್ಷಿ ಹೇಳಿಕೆ ದಾಖಲಿಸಿದ್ದಾರೆ. ಪ್ರದೋಶ್ ಸಾಕ್ಷಿ ಹೇಳಿಕೆ ತಡೆಯುವ ನಿಟ್ಟಿನಲ್ಲಿ ದರ್ಶನ್ ಹಾಗೂ ಅವರ ವಕೀಲರ ವಕೀಲರು ನಡೆಸಿದ ಪ್ರಯತ್ನ ವಿಫಲವಾಗಿದೆ. ಆದರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರದೋಶ್ ಹೇಳಿಕೆಯನ್ನು ಪರಿಗಣಿಸಬಾರದು ಎಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಸುಪ್ರೀಂ ಕೋರ್ಟ್ ಏನು ಹೇಳಲಿದೆ? ಕಾದುನೋಡಬೇಕಿದೆ.
ರಾಜ್ಯ ಸರ್ಕಾರಕ್ಕೆ 2000 ರೂಪಾಯಿ ದಂಡ ವಿಧಿಸಿದ ಹೈಕೋರ್ಟ್: ಕಾರಣವೇನು?
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 2000 ರೂಪಾಯಿ ದಂಡ ವಿಧಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಗೆ ಸಂಬಂಧಿದ್ಸಿದ ವಿಚಾರಣೆ ವೇಳೆ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಗೆ ಪ್ರತಿಕ್ರಿಯಿಸಲು ರಾಜ್ಯ ಸರ್ಕಾರ ಪದೇ ಪದೇ ಕಾಲಾವಕಾಶ ಕೋರಿ ವಿಳಂಬ ನೀತಿ ಅನುಸರಿಸಿದ್ದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆಯಲ್ಲದೇ 2000 ರೂಪಯೈ ದಂಡ ವಿಧಿಸಿದೆ.
ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪಿಸಿ ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಸಂದರ್ಭದಲ್ಲಿ ಈ ಆದೇಶ ಹೊರಬಿದ್ದಿದೆ. ಅಕ್ಟೋಬರ್ 29, 2025 ರಿಂದಲೂ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಕಾಲಾವಕಾಶ ಕೇಳುತ್ತಿರುವುದು ಹೈಕೋರ್ಟ್ ಅಸಮಾಧಾನಕ್ಕೆ ಕಾರಣವಾಗಿದೆ. ‘ಸುಮಾರು ಒಂದು ವರ್ಷದಿಂದಲೂ ಈ ವಿಳಂಬ ನೀತಿ ಮುಂದುವರಿದಿದೆ’ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರಕ್ಕೆ 2000 ರೂ ದಂಡ ವಿಧಿಸಿದ ನ್ಯಾಯಾಲಯ, ಮುಂದಿನ ಎರಡು ವಾರಗಳಲ್ಲಿ ಯಾವುದೇ ವಿಳಂಬವಿಲ್ಲದೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ತಾಕೀತು ಮಾಡಿದೆ.
ಆಡಳಿತ ಪಕ್ಷದ ಶಾಸಕರಿಗೆ 50 ಕೋಟಿ ರೂಪಾಯಿ, ವಿರೋಧ ಪಕ್ಷದ ಶಾಸಕರಿಗೆ 25 ಕೋಟಿ ರೂಪಾಯಿ ಅನುದಾನ ನೀಡಿ ತಾರತಮ್ಯ ಮಾಡಲಾಗಿದೆ ಎಂದು ಪಿಐಎಲ್ನಲ್ಲಿ ಆರೋಪಿಸಲಾಗಿತ್ತು. ಅನುದಾನ ಹಂಚಿಕೆಯಲ್ಲಿನ ಸರ್ಕಾರದ ತಾರತಮ್ಯ ನೀತಿಯನ್ನು ಪ್ರಶ್ನಿಸಿದ್ದ ಈ ಅರ್ಜಿಗೆ ಸಮರ್ಪಕ ಪ್ರತಿಕ್ರಿಯೆ ನೀಡುವಲ್ಲಿ ಸರ್ಕಾರ ವಿಫಲವಾಗಿರುವುದಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ನ್ಯಾಯಾಲಯದ ಆದೇಶ ಪಾಲಿಸುವಂತೆ ಸರ್ಕಾರಕ್ಕೆನಿರ್ದೇಶನ ನೀಡಲಾಗಿದೆ.

