ಬೆಂಗಳೂರು : ಎಲ್ಲೋ ನಡೆಯುತ್ತಿರುವ ಯುದ್ಧ, ಇನ್ನೆಲ್ಲೋ ಉಂಟಾಗುತ್ತಿರುವ ಇಂಧನ ಕೊರತೆ ಇದೀಗ ಭಕ್ತರ ಹೊಟ್ಟೆಗೂ ತಟ್ಟಿದೆ. ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಎಲ್ಪಿಜಿ (LPG) ಅಭಾವವು ಬೆಂಗಳೂರಿನ ಪವಿತ್ರ ಧಾರ್ಮಿಕ ಕೇಂದ್ರಗಳ ಮೇಲೂ ಕರಿನೆರಳು ಬೀರಿದೆ.
ಹೌದು. ನಗರದ ಸುಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ವಾಣಿಜ್ಯ ಸಿಲಿಂಡರ್ಗಳ ಕೊರತೆಯಿಂದಾಗಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಅನ್ನದಾಸೋಹಕ್ಕೆ ಇದೀಗ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಅಮ್ಮನ ದರ್ಶನಕ್ಕೆ ಬರುವ ಸಾವಿರಾರು ಭಕ್ತರು ಪ್ರಸಾದವಿಲ್ಲದೆ ಬರಿಗೈಲಿ ಹಿಂದಿರುಗುವಂತಾಗಿದ್ದು, ಬೆಲೆ ಏರಿಕೆ ಮತ್ತು ಪೂರೈಕೆ ವ್ಯತ್ಯಯದ ಬಿಸಿ ದೇವರಿಗೂ ತಪ್ಪಿಲ್ಲ ಎಂಬಂತಾಗಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ನೇರ ಪರಿಣಾಮವಾಗಿ ಭಾರತದಲ್ಲಿ ಎಲ್ಪಿಜಿ (LPG) ಸಿಲಿಂಡರ್ಗಳ ತೀವ್ರ ಕೊರತೆ ಎದುರಾಗಿದೆ. ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಸ್ಥಾನಕ್ಕೆ ಪ್ರತಿದಿನ ಅನ್ನದಾಸೋಹಕ್ಕಾಗಿ ಹೆಚ್ಚಿನ ಸಂಖ್ಯೆಯ ವಾಣಿಜ್ಯ ಸಿಲಿಂಡರ್ಗಳ ಅವಶ್ಯಕತೆಯಿದೆ. ಆದರೆ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಅನ್ನಪ್ರಸಾದ ತಯಾರಿಸಲು ಸಾಧ್ಯವಾಗುತ್ತಿಲ್ಲ.
ಅನ್ನದಾಸೋಹ ಬಂದ್: ಸರಿಯಾದ ಸಮಯಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯವಾಗದ ಕಾರಣ, ದೇವಸ್ಥಾನದ ಆಡಳಿತ ಮಂಡಳಿಯು ಅನ್ನಪ್ರಸಾದ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.ಪ್ರತಿದಿನ ಸಾವಿರಾರು ಭಕ್ತರು ಇಲ್ಲಿ ಪ್ರಸಾದ ಸ್ವೀಕರಿಸುತ್ತಿದ್ದರು. ಈಗ ಹಠಾತ್ ಸೇವೆ ಸ್ಥಗಿತಗೊಂಡಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.
ಹೋಟೆಲ್ಗಳಿಗೂ ಸಂಕಷ್ಟ: ಕೇವಲ ದೇವಸ್ಥಾನ ಮಾತ್ರವಲ್ಲದೆ, ಬೆಂಗಳೂರಿನ ಹಲವು ಹೋಟೆಲ್ಗಳೂ ಕೂಡ ಗ್ಯಾಸ್ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಕೆಲವು ಕಡೆ ಸೌದೆ ಒಲೆಗಳ ಬಳಕೆಯೂ ಆರಂಭವಾಗಿದೆ.

