ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯರಿಗೆ ನೀಡುತ್ತಿದ್ದ ಮಾಸಿಕ ಪಿಂಚಣಿಯನ್ನು 10 ಸಾವಿರ ರೂ. ನಿಂದ 50 ಸಾವಿರ ರೂ.ಗೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳ ಮನವೊಲಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಸಿಗಬೇಕಾದ ನೆರವು ಮತ್ತು ಪರಿಹಾರ ಕಳೆದ ಹತ್ತು ವರ್ಷಕ್ಕೂ ಹೆಚ್ಚು ಅವಧಿಯಿಂದ ಸಿಗದಿರುವ ಬಗ್ಗೆ ಕಾಂಗ್ರೆಸ್ ಸದಸ್ಯ ಕೆ. ಶಿವಕುಮಾರ್ ಪ್ರಸ್ತಾಪಿಸಿದ್ದಾರೆ. ವಿ ಪಕ್ಷನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿಯ ಹೇಮಲತಾ ನಾಯಕ್, ಭಾರತಿಶೆಟ್ಟಿ, ಕಾಂಗ್ರೆಸ್ ನ ಉಮಾಶ್ರೀ ಅವರು ಇದಕ್ಕೆ ದನಿಗೂಡಿಸಿದ್ದಾರೆ.
ಇದಕ್ಕೆ ಉತ್ತರ ನೀಡಿದ ಸಚಿವ ಪರಮೇಶ್ವರ್, ಆ್ಯಸಿಡ್ ದಾಳಿಗೆ ಒಳಗಾದ ಎಲ್ಲಾ ಮಹಿಳೆಯರಿಗೆ 2022ರ ಏಪ್ರಿಲ್ 1ರಿಂದ ಮಾಸಿಕ 10 ಸಾವಿರ ರೂ. ಪಿಂಚಣಿ ನೀಡಲಾಗುತ್ತಿದೆ. 2025ರ ಡಿಸೆಂಬರ್ ನಲ್ಲಿ ಒಟ್ಟು 59 ಫಲಾನುಭವಿಗಳಿಗೆ ಪಿಂಚಣಿ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಇರುವ 169 ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ ಮಾಸಿಕ 50 ಸಾವಿರ ರೂ. ಪಿಂಚಣಿ ನೀಡುವಂತೆ ಮುಖ್ಯಮಂತ್ರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ. ವಸತಿ ಯೋಜನೆಗಳಲ್ಲಿ 169 ಮಂದಿಗೂ ಉಚಿತವಾಗಿ ಮನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

