ಬೆಂಗಳೂರು: ಸರ್ಕಾರಿ ವೈದ್ಯಾಧಿಕಾರಿಗಳು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದಿನಿಂದ ಕೈಗೊಂಡಿದ್ದ ಮುಷ್ಕರ ಹಿಂಪಡೆದುಕೊಂಡಿದ್ದಾರೆ.
ಮಾರ್ಚ್ 11 ರಿಂದ ಒಪಿಡಿ ಬಂದ್ ಮಾಡಿ ಮುಷ್ಕರ ಕೈಗೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಧಿಕಾರಿಗಳ ಸಂಘ ಮುಷ್ಕರ ಹಿಂಪಡೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವರಾದ ಡಿನೇಶ್ ಗುಂಡೂರಾವ್, ಡಾ.ಹೆಚ್.ಸಿ. ಮಹದೇವಪ್ಪ ಸೇರಿದಂತೆ ಇತರರು ವೈದ್ಯಾಧಿಕಾರಿಗಳ ಸಂಘದ ಜೊತೆ ಮಂಗಳವಾರ ಸಂಜೆ ಸಭೆ ನಡೆಸಿದ್ದು, ಸಂಧಾನ ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ ಪಡೆಯಲಾಗಿದೆ.
ಸಂಧಾನ ಸಭೆ ಕುರಿತು ಮಾಹಿತಿ ನೀಡಿದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ರವೀಂದ್ರನಾಥ್ ಎಂ. ಮೇಟಿ ಅವರು, ನಮ್ಮ ಬಹುತೇಕ ವೇದಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲು ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ. ಕರ್ತವ್ಯದ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಕ್ಟೀಸ್ ಮಾಡುವ ವೇಳೆ ಒಳ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಕಿರುವ ನಿರ್ಬಂಧ ಹಿಂಪಡೆಯಲು ಸದ್ಯಕ್ಕೆ ಒಪ್ಪಿಲ್ಲ. ನಮ್ಮ ಸಂಘದ ಬೇಡಿಕೆಗಳಿಗೆ ಸರ್ಕಾರ ಬಹುತೇಕ ಒಪ್ಪಿಗೆ ನೀಡಿದೆ. ಹೀಗಾಗಿ ಮಾರ್ಚ್ 11ರಿಂದ ಕರೆ ನೀಡಿದ್ದ ಒಪಿಡಿ ಸೇವೆ ಬಂದ್ ಹಾಗೂ ಮುಷ್ಕರವನ್ನು ಹಿಂಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

