ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿ ಮತ್ತು ದೇಶದ ಪ್ರಮುಖ ನಗರಗಳಲ್ಲಿ ಕಂಡುಬಂದಿರುವ ಎಲ್ಪಿಜಿ (LPG) ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ. ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆಗಳ ಮೇಲೆ ‘ನಿತ್ಯೋಪಯೋಗಿ ವಸ್ತುಗಳ ಕಾಯ್ದೆ-1955’ ಅನ್ನು ಪ್ರಯೋಗಿಸಿರುವ ಕೇಂದ್ರ, ಇಂಧನ ಮತ್ತು ಅನಿಲ ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗದಂತೆ ಕಠಿಣ ಎಚ್ಚರಿಕೆ ನೀಡಿದೆ.
ಈ ಕಾನೂನು ಜಾರಿಯಿಂದಾಗಿ ಇನ್ಮುಂದೆ ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಕಾಳಸಂತೆ ಮಾರಾಟಕ್ಕೆ ಬ್ರೇಕ್ ಬೀಳಲಿದೆ. ಅಷ್ಟಕ್ಕೂ ಏನಿದು ಕಾನೂನು? ಸಾಮಾನ್ಯ ಗ್ರಾಹಕರ ಮೇಲೆ ಇದು ಯಾವ ರೀತಿ ಪ್ರಭಾವ ಬೀರುತ್ತದೆ? ಇಲ್ಲಿದೆ ಸಂಪೂರ್ಣ ವಿವರ
ಹೌದು. ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಕೊರತೆಯಾಗದಂತೆ ತಡೆಯಲು ಕೇಂದ್ರ ಸರ್ಕಾರವು ತೈಲ ಸಂಸ್ಕರಣಾ ಸಂಸ್ಥೆಗಳ ಮೇಲೆ ‘ನಿತ್ಯೋಪಯೋಗಿ ವಸ್ತುಗಳ ಕಾಯ್ದೆ, 1955’ ಅನ್ನು ಜಾರಿಗೊಳಿಸಿದೆ.
ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು ?
ಭಾರತದಲ್ಲಿ ಸುಮಾರು 332 ಮಿಲಿಯನ್ ಸಕ್ರಿಯ ಎಲ್ಪಿಜಿ (LPG) ಬಳಕೆದಾರರಿದ್ದಾರೆ. ಇತ್ತೀಚೆಗೆ ಮುಂಬೈ, ಬೆಂಗಳೂರು ಮತ್ತು ಚೆನ್ನೈನಂತಹ ಮಹಾನಗರಗಳಲ್ಲಿ ವಾಣಿಜ್ಯ ಸಿಲಿಂಡರ್ಗಳ ಕೊರತೆ ಕಂಡುಬಂದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಕೃತಕ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಏನಿದು ನಿತ್ಯೋಪಯೋಗಿ ವಸ್ತುಗಳ ಕಾಯ್ದೆ(Essential Commodities Act)?
ಕೆಲವು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಕಾಯ್ದೆಯನ್ನು ರೂಪಿಸಲಾಗಿದೆ.
- ನಿಯಂತ್ರಣ: ಆಹಾರ ಪದಾರ್ಥಗಳು, ರಸಗೊಬ್ಬರಗಳು, ಔಷಧಿಗಳು ಮತ್ತು ಇಂಧನವನ್ನು ‘ಅಗತ್ಯ ವಸ್ತುಗಳು’ ಎಂದು ಘೋಷಿಸುವ ಮೂಲಕ ಅವುಗಳ ಉತ್ಪಾದನೆ, ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸುವ ಅಧಿಕಾರ ಕೇಂದ್ರಕ್ಕೆ ಸಿಗುತ್ತದೆ.
- ಉದ್ದೇಶ: ಕಾಳಸಂತೆ ಮಾರಾಟ (Black Marketing), ಅನಗತ್ಯ ಸಂಗ್ರಹಣೆ (Hoarding) ಮತ್ತು ಕೃತಕ ಅಭಾವವನ್ನು ತಡೆಯುವುದು ಇದರ ಮುಖ್ಯ ಉದ್ದೇಶ.
ಕೇಂದ್ರದ ಹೊಸ ನಿಯಮಗಳೇನು?
- ಎಲ್ಪಿಜಿ ಉತ್ಪಾದನೆಗೆ ಆದ್ಯತೆ: ಎಲ್ಪಿಜಿ ಉತ್ಪನ್ನಗಳನ್ನು ಹೆಚ್ಚಿಸುವಂತೆ ತೈಲ ಸಂಸ್ಕರಣಾ ಘಟಕಗಳಿಗೆ (Refineries) ಆದೇಶಿಸಲಾಗಿದೆ.
- ಬುಕಿಂಗ್ ಅವಧಿ ವಿಸ್ತರಣೆ: ಗ್ಯಾಸ್ ಸಿಲಿಂಡರ್ಗಳ ಅಕ್ರಮ ಮಾರಾಟ ತಡೆಯಲು, ಸಿಲಿಂಡರ್ ಬುಕಿಂಗ್ ಅವಧಿಯನ್ನು ಪ್ರಸ್ತುತ ಇರುವ 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ.
- ಆದ್ಯತೆಯ ವಲಯಗಳು: ದೇಶೀಯ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಮತ್ತು ಸಾರಿಗೆಗೆ ಬಳಸುವ ಸಿಎನ್ಜಿ (CNG) ಪೂರೈಕೆಗೆ ಮೊದಲ ಆದ್ಯತೆ ನೀಡಲಾಗುವುದು.
ಯಾವ ಕಂಪನಿಗಳ ಮೇಲೆ ಪ್ರಭಾವ ಬೀರುತ್ತದೆ?
ನೈಸರ್ಗಿಕ ಅನಿಲ ಉತ್ಪಾದನೆ, ಆಮದು, ಮಾರುಕಟ್ಟೆ ಮತ್ತು ಸಾರಿಗೆಯಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳು ಈ ಆದೇಶವನ್ನು ಪಾಲಿಸಬೇಕಾಗುತ್ತದೆ. ಮುಖ್ಯವಾಗಿ:
- ONGC, RIL, OIL, ವೇದಾಂತ ಮತ್ತು ಇತರ ದೇಶೀಯ ಅನಿಲ ಉತ್ಪಾದಕರು.
- GAIL ಮತ್ತು ಇತರ ಗ್ಯಾಸ್ ಮಾರ್ಕೆಟಿಂಗ್ ಸಂಸ್ಥೆಗಳು.
- ಎಲ್ಎನ್ಜಿ (LNG) ಟರ್ಮಿನಲ್ ಆಪರೇಟರ್ಗಳು ಮತ್ತು ನಗರ ಗ್ಯಾಸ್ ವಿತರಣಾ ಕಂಪನಿಗಳು.
ಪ್ರಾಧಾನ್ಯತೆ ಇರುವ ವಲಯಗಳಿಗೆ ಗ್ಯಾಸ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ಪೆಟ್ರೋಕೆಮಿಕಲ್ ಘಟಕಗಳು ಮತ್ತು ವಿದ್ಯುತ್ ಸ್ಥಾವರಗಳಿಗೆ ನೀಡುವ ಗ್ಯಾಸ್ ಪೂರೈಕೆಯಲ್ಲಿ ಅಲ್ಪ ಪ್ರಮಾಣದ ಕಡಿತವನ್ನೂ ಮಾಡಬಹುದಾಗಿದೆ.

