ಬೆಂಗಳೂರು : ಸಾಮಾನ್ಯ ಜನರ ಬದುಕು ದಿನೇ ದಿನೇ ದುಬಾರಿಯಾಗುತ್ತಿದೆ. ಇತ್ತೀಚೆಗಷ್ಟೇ ಅಡುಗೆ ಅನಿಲ (LPG) ಬೆಲೆ ಏರಿಕೆಯಾಗಿ ಸಾರ್ವಜನಿಕರು ಕಂಗಾಲಾಗಿದ್ದರೆ, ಅದರ ಬಿಸಿ ಈಗ ಸಾರಿಗೆ ಕ್ಷೇತ್ರಕ್ಕೂ ತಟ್ಟಿದೆ. ಸಿಲಿಂಡರ್ ಬೆಲೆ ಏರಿಕೆಯನ್ನು ನೆಪವಾಗಿಟ್ಟುಕೊಂಡಿರುವ ಆಟೋ ಚಾಲಕರು, ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.
ಹೌದು. ದೇಶಾದ್ಯಂತ ಗೃಹ ಬಳಕೆ ಮತ್ತು ವಾಣಿಜ್ಯ ಸಿಲಿಂಡರ್ ಬೆಲೆಗಳು ಭಾರಿ ಏರಿಕೆ ಕಂಡ ಬೆನ್ನಲ್ಲೇ, ಸಾಮಾನ ಜನರ ಸಾರಿಗೆ ಬಜೆಟ್ ಕೂಡ ಏರುಪೇರಾಗಿದೆ. ಗ್ಯಾಸ್ ದರ ಏರಿಕೆಯನ್ನೇ ನೆಪವಾಗಿಸಿಕೊಂಡರುವ ಆಟೋ ಚಾಲಕರು ನಗರದ ಹಲವೆಡೆ ಮೀಟರ್ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ವಿಶೇಷವಾಗಿ ಪ್ರತಿ ಕಿಲೋಮೀಟರ್‌ಗೆ ಕನಿಷ್ಠ 20 ರೂಪಾಯಿ ನೀಡುವಂತೆ ಪ್ರಯಾಣಿಕರ ಮೇಲೆ ಒತ್ತಡ ಹೇರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ 60 ರೂ. ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 114.50 ರೂ. ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಆಟೋ ಎಲ್‌ಪಿಜಿ (Auto LPG) ದರವೂ ಏರಿಕೆಯಾಗಿದ್ದು, ಚಾಲಕರು ಅನಿವಾರ್ಯವಾಗಿ ದರ ಹೆಚ್ಚಳದ ಮೊರೆ ಹೋಗಿದ್ದಾರೆ. ಸದ್ಯ ನಗರದ ಹಲವೆಡೆ ಆಟೋ ಚಾಲಕರು ಪ್ರತಿ ಕಿಲೋಮೀಟರ್‌ಗೆ ಕನಿಷ್ಠ 20 ರೂಪಾಯಿ ನೀಡುವಂತೆ ಪ್ರಯಾಣಿಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಸರ್ಕಾರ ಅಥವಾ ಸಾರಿಗೆ ಇಲಾಖೆಯು ಅಧಿಕೃತವಾಗಿ ಆಟೋ ಮೀಟರ್ ದರವನ್ನು ಪರಿಷ್ಕರಿಸುವ ಮೊದಲೇ ಚಾಲಕರು ಮನಬಂದಂತೆ ಹಣ ವಸೂಲಿ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. “ಈಗಾಗಲೇ ಜೀವನ ನಿರ್ವಹಣೆ ಕಷ್ಟವಾಗಿದೆ, ಅದರ ಮೇಲೆ ಆಟೋ ದರವೂ ಹೆಚ್ಚಾದರೆ ಕಚೇರಿಗೆ ಹೋಗುವವರು ಮತ್ತು ಸಾಮಾನ್ಯ ಜನರಿಗೆ ಭಾರಿ ಹೊರೆಯಾಗುತ್ತದೆ” ಎಂದು ಪ್ರಯಾಣಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಚಾಲಕರ ವಾದ: ಆಟೋ ಎಲ್‌ಪಿಜಿ (Auto LPG) ದರ ಕೂಡ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಹಳೆಯ ದರದಲ್ಲಿ ಆಟೋ ಓಡಿಸುವುದು ನಮಗೆ ನಷ್ಟವಾಗುತ್ತಿದೆ ಎಂಬುದು ಚಾಲಕರ ಮಾತು.
ಪ್ರಯಾಣಿಕರ ಸಂಕಷ್ಟ : ಅಧಿಕೃತವಾಗಿ ಮೀಟರ್ ದರ ಪರಿಷ್ಕರಣೆ ಆಗುವ ಮೊದಲೇ ಚಾಲಕರು ಮನಬಂದಂತೆ ದರ ವಸೂಲಿ ಮಾಡುತ್ತಿರುವುದು ಕಚೇರಿಗೆ ಹೋಗುವವರು ಮತ್ತು ಸಾಮಾನ್ಯ ಜನರಿಗೆ ದೊಡ್ಡ ಹೊರೆಯಾಗಿದೆ.
ಅನಧಿಕೃತವಾಗಿ ದರ ಹೆಚ್ಚಳ ಮಾಡುತ್ತಿರುವ ಬಗ್ಗೆ ಸಾರಿಗೆ ಇಲಾಖೆಗೆ ದೂರುಗಳು ಹೋಗುತ್ತಿದ್ದು, ಮೀಟರ್ ದರಕ್ಕಿಂತ ಹೆಚ್ಚು ವಸೂಲಿ ಮಾಡುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ, ಗ್ಯಾಸ್ ಬೆಲೆ ಇಳಿಕೆಯಾಗದ ಹೊರತು ಈ ಸಮಸ್ಯೆ ಬಗೆಹರಿಯುವುದು ಕಷ್ಟ ಎನ್ನಲಾಗುತ್ತಿದೆ.

