ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಟಾಂಗ್ ಕೊಟ್ಟಿದ್ದಾರೆ.
226 ಕ್ಷೇತ್ರವಲ್ಲ, ಇಡೀ ರಾಜ್ಯವನ್ನೇ ಸುತ್ತಾಡಲಿ ಬೇಡ ಎಂದವರು ಯಾರು? ಆದರೆ ಸುಮ್ಮನೆ ಇಲ್ಲಿಗೆ ಬಂದು ಗೊಂದಲ ಸೃಷ್ಟಿ ಮಾಡುವುದು ಬೇಡ. ಕಾಂಗ್ರೆಸ್ ಹೈಕಮಾಂಡ್ ಪಕ್ಷ, ಇಡೀ ರಾಜ್ಯಕ್ಕೆ ದೇಶಕ್ಕೆ ಪಕ್ಷ ಇದೆ. ಹಾಗಾದರೆ ಜಮೀರ್ ಹೈಕಮಾಂಡಾ ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಮರಿಗೆ ಟಿಕೆಟ್ ಕೊಡುವುದಾಗಿ ಈ ಹಿಂದೆ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ್, ಶಾಮನೂರು ಅವರು ಹೇಳಿದ್ದಾರೆ ಎಂಬ ವಿಡಿಯೋ ಏನಾದರೂ ಇದೆಯಾ? ಇವರ ಬಳಿ ಏನಾದರೂ ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದಾರಾ? ಈ ಬಗ್ಗೆ ಜಬ್ಬಾರ್ ಅಷ್ಟೇ ಹೇಳಿಕೊಂಡಿರುವುದು. ಅದು ಬಿಟ್ಟು ಯಾರು ಹೇಳಿಲ್ಲ. 1994ರಿಂದಲೂ ಅಬ್ದುಲ್ ಜಬ್ಬಾರ್ ಇದನ್ನೇ ಹೇಳಿಕೊಂಡು ಬಂದಿದ್ದಾರೆ. ಈ ಒಬ್ಬನಿಂದ ಊರು ಹಾಳಾಗುವುದು ಬೇಡ. ಇಂತಹ ಹೇಳಿಕೆಗಳು ಜೋಕರ್ ಕೆಲಸದ ರೀತಿ ಆಗಿವೆ. ಗೆಲ್ಲುವ ಶಕ್ತಿ ಯಾರೆಂದು ಎಲ್ಲರೂ ಕುಳಿತು ಒಂದು ನಿರ್ಣಯಕ್ಕೆ ಬರುತ್ತೇವೆ ಎಂದು ದಾವಣಗೆರೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

