ಬೆಂಗಳೂರು : ಸ್ಯಾಂಡಲ್ವುಡ್ನ ಅತ್ಯಂತ ಯಶಸ್ವಿ ರೋಮ್ಯಾಂಟಿಕ್ ಸರಣಿಗಳಲ್ಲಿ ಒಂದಾದ ‘ಲವ್ ಮಾಕ್ಟೆಲ್’ನ ಮೂರನೇ ಭಾಗದ ಟ್ರೈಲರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ ಅನ್ನು ಅವರ ಮುದ್ದಿನ ಪುತ್ರಿ ಪರಿ ಬಿಡುಗಡೆ ಮಾಡಿರುವುದು ಈ ಬಾರಿಯ ವಿಶೇಷ.
ಟ್ರೈಲರ್ ಆರಂಭದಲ್ಲಿ ‘ಲವ್ ಮಾಕ್ಟೆಲ್’ ಭಾಗ 1 ಮತ್ತು 2ರ ಪ್ರಮುಖ ದೃಶ್ಯಗಳನ್ನು ತೋರಿಸುವ ಮೂಲಕ ಪ್ರೇಕ್ಷಕರನ್ನು ಹಳೆಯ ನೆನಪುಗಳಿಗೆ ಕರೆದೊಯ್ಯಲಾಗಿದೆ. ಇದು ಆದಿಯ ಜೀವನದ ಕತೆಯ ಅಂತಿಮ ಅಧ್ಯಾಯ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ತಂದೆ-ಮಗಳ ಬಾಂಧವ್ಯ: ಎರಡನೇ ಭಾಗದಲ್ಲಿ ಆದಿ ಒಂದು ಪುಟ್ಟ ಮಗುವನ್ನು ದತ್ತು ಪಡೆಯುವ ಮೂಲಕ ಸಿನಿಮಾ ಅಂತ್ಯವಾಗಿತ್ತು. ಈಗ ಈ ಮೂರನೇ ಭಾಗದಲ್ಲಿ ಆದಿ ಮತ್ತು ಆ ಪುಟ್ಟ ಮಗಳ ನಡುವಿನ ಭಾವನಾತ್ಮಕ ಸಂಬಂಧ ಹಾಗೂ ಮಗಳಿಗಾಗಿ ಆದಿ ಪಡುವ ಜವಾಬ್ದಾರಿಯ ಮೇಲೆ ಕತೆ ಕೇಂದ್ರೀಕೃತವಾಗಿರುವುದು ಟ್ರೈಲರ್ನಲ್ಲಿ ಎದ್ದು ಕಾಣುತ್ತಿದೆ.
ತಾರಾಗಣ: ಡಾರ್ಲಿಂಗ್ ಕೃಷ್ಣ ಜೊತೆಗೆ ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್, ರೆಚೆಲ್ ಡೇವಿಡ್, ಶ್ವೇತಾ ಪ್ರಸಾದ್, ದಿಲೀಪ್ ರಾಜ್ ಮತ್ತು ಬಾಲನಟಿ ಸಂವೃತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ಮತ್ತು ಶ್ರೀ ಕ್ರೇಜಿ ಮೈಂಡ್ಸ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಮುಂದೂಡಲ್ಪಟ್ಟ ಕಾರಣ, ಆ ಜಾಗಕ್ಕೆ ‘ಲವ್ ಮಾಕ್ಟೆಲ್ 3’ ಲಗ್ಗೆ ಇಟ್ಟಿದೆ. ಯುಗಾದಿ ಹಬ್ಬದ ಸಂಭ್ರಮದ ಅಂಗವಾಗಿ ಮಾರ್ಚ್ 19, 2026 ರಂದು ಸಿನಿಮಾ ತೆರೆಕಾಣಲಿದೆ.
ಟ್ರೈಲರ್ನಲ್ಲಿ ಗಮನ ಸೆಳೆದ ಸಂಭಾಷಣೆ
“ಇದು ನನ್ನ ಲೈಫ್ನ ಲಾಸ್ಟ್ ಚಾಪ್ಟರ್, ಅಂದರೆ ನಾನು ನಿಮಗೆ ಹೇಳ್ತಿರೋ ಕೊನೆಯ ಕತೆ” ಎಂಬ ಡೈಲಾಗ್ ಮೂಲಕ ಡಾರ್ಲಿಂಗ್ ಕೃಷ್ಣ ಈ ಸರಣಿಗೆ ಅಂತ್ಯ ಹಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ.

