HomeIndiaರಾಷ್ಟ್ರಪತಿ ದ್ರೌಪದಿ ಮುರ್ಮು ಪಶ್ಚಿಮ ಬಂಗಾಳ ಭೇಟಿ, ರಾಜ್ಯದ ನಿರ್ಲಕ್ಷ್ಯ, ರಾಜಕೀಯ ಬಿರುಗಾಳಿ!

ರಾಷ್ಟ್ರಪತಿ ದ್ರೌಪದಿ ಮುರ್ಮು ಪಶ್ಚಿಮ ಬಂಗಾಳ ಭೇಟಿ, ರಾಜ್ಯದ ನಿರ್ಲಕ್ಷ್ಯ, ರಾಜಕೀಯ ಬಿರುಗಾಳಿ!

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2026ರ ಹೊತ್ತಿನಲ್ಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಪಶ್ಚಿಮ ಬಂಗಾಳ ಭೇಟಿ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ನಡೆದ ಅಂತರಾಷ್ಟ್ರೀಯ ಸಂತಾಲ್ ಸಮ್ಮೇಳನದ ವ್ಯವಸ್ಥೆಗಳ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಬುಡಕಟ್ಟು ಸಂಸ್ಕೃತಿಯ ಸಂಭ್ರಮಾಚರಣೆಯಾಗಬೇಕಿದ್ದ ಕಾರ್ಯಕ್ರಮವು ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಸಮ್ಮೇಳನಕ್ಕೆ ಆಯ್ಕೆ ಮಾಡಿಕೊಂಡ ಸ್ಥಳದ ಬಗ್ಗೆ ಪ್ರಶ್ನಿಸಿದರು. ತಮ್ಮದೇ ಸಂಸ್ಕೃತಿಯನ್ನು ಆಚರಿಸಲು ಹಮ್ಮಿಕೊಂಡಿದ್ದ ಈ ಸಮ್ಮೇಳನಕ್ಕೆ ಸಂತಾಲ್ ಸಮುದಾಯದ ಅನೇಕ ಸದಸ್ಯರು ಬರಲು ಸಾಧ್ಯವಾಗದಿರುವುದು ತಮಗೆ ವಿಷಾದ ತಂದಿದೆ ಎಂದು ಹೇಳಿದರು. ಅವರ ಅಸಾಮಾನ್ಯ ನೇರ ನುಡಿ ತಕ್ಷಣವೇ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು ಮತ್ತು ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು, ನಂತರ ಈ ವಿವಾದ ಮತ್ತಷ್ಟು ತಾರಕಕ್ಕೇರಿತು.

ಅಲ್ಲಿನ ಪರಿಸ್ಥಿತಿಯನ್ನು ‘ಅವಮಾನಕರ’ ಎಂದು ಕರೆದರು. ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ಮೋದಿ “ರಾಷ್ಟ್ರಪತಿಯವರು ವ್ಯಕ್ತಪಡಿಸಿದ ನೋವು ದೇಶಾದ್ಯಂತ ಜನರಿಗೆ ವಿಷಾದ ತಂದಿದೆ” ಎಂದು ಹೇಳಿದ್ದಾರೆ.

“ಇದು ಅವಮಾನಕರ. ಪ್ರಜಾಪ್ರಭುತ್ವ ಮತ್ತು ಬುಡಕಟ್ಟು ಸಮುದಾಯಗಳ ಸಬಲೀಕರಣದಲ್ಲಿ ನಂಬಿಕೆಯಿರುವ ಪ್ರತಿಯೊಬ್ಬರಿಗೂ ಇದರಿಂದ ಬೇಸರವಾಗಿದೆ” ಎಂದು ಪ್ರಧಾನಿಗಳು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಸ್ವತಃ ಬುಡಕಟ್ಟು ಸಮುದಾಯದಿಂದ ಬಂದವರಾದ ಮುರ್ಮು ಅವರು ವ್ಯಕ್ತಪಡಿಸಿದ ನೋವು ನಾಗರಿಕರಲ್ಲಿ ಅಪಾರ ವಿಷಾದವನ್ನು ಉಂಟುಮಾಡಿದೆ ಎಂದು ಹೇಳಿದ್ದಾರೆ.

ಈ ಪರಿಸ್ಥಿತಿಗೆ ರಾಜ್ಯ ಆಡಳಿತವೇ ಕಾರಣ ಎಂದು ದೂಷಿಸಿರುವ ಮೋದಿ, “ಟಿಎಂಸಿ ಸರ್ಕಾರವು ಎಲ್ಲಾ ಮಿತಿಗಳನ್ನು ಮೀರಿದೆ ಮತ್ತು ಈ ಘಟನೆಯು ರಾಷ್ಟ್ರಪತಿಗಳಿಗೆ ಮಾಡಿದ ಅವಮಾನ” ಎಂದು ತಿಳಿಸಿದ್ದಾರೆ.

ಸಂತಾಲ್ ಸಂಸ್ಕೃತಿಯ ವಿಷಯವನ್ನು ನಿರ್ವಹಿಸಿದ ರೀತಿಯನ್ನು ಟೀಕಿಸಿದ ಅವರು, ಇಂತಹ ಪ್ರಮುಖ ವಿಷಯವನ್ನು ಎಂದಿಗೂ ನಿರ್ಲಕ್ಷ್ಯದಿಂದ ಕಾಣಬಾರದು. ಸಾಂವಿಧಾನಿಕ ಘನತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿರುವ ಮೋದಿ, ರಾಷ್ಟ್ರಪತಿ ಹುದ್ದೆಯು ರಾಜಕೀಯಕ್ಕಿಂತ ಮಿಗಿಲಾದುದು ಮತ್ತು ಅದನ್ನು ಯಾವಾಗಲೂ ಗೌರವಿಸಬೇಕು ಎಂದು ಸಲಹೆ ಸಹ ನೀಡಿದ್ದಾರೆ.

ಸ್ಥಳ ಬದಲಾವಣೆ ವಿವಾದ: ಪಶ್ಚಿಮ ಬಂಗಾಳ ಸರ್ಕಾರವು ಸಮ್ಮೇಳನದ ಸ್ಥಳವನ್ನು ಡಾರ್ಜಿಲಿಂಗ್ ಜಿಲ್ಲೆಯ ಬಿಧಾನನಗರದಿಂದ ಸಿಲಿಗುರಿಯ ಹೊರವಲಯದಲ್ಲಿರುವ ಬಾಗ್ಡೋಗ್ರಾ ಪ್ರದೇಶದ ಗೊಸೈನ್‌ಪುರಕ್ಕೆ ಬದಲಾಯಿಸಿತ್ತು. ಬಳಿಕ ಈ ವಿವಾದ ಪ್ರಾರಂಭವಾಯಿತು. ರಾಷ್ಟ್ರಪತಿಯವರ ಪ್ರಕಾರ, ಈ ನಿರ್ಧಾರದಿಂದಾಗಿ ಸಂತಾಲ್ ಸಮುದಾಯದ ಅನೇಕ ಸದಸ್ಯರಿಗೆ ಕಾರ್ಯಕ್ರಮವನ್ನು ತಲುಪುವುದು ಕಷ್ಟವಾಯಿತು.

ರಾಷ್ಟ್ರಪತಿಗಳ ಪ್ರಶ್ನೆ: “ಹತ್ತಿರದಲ್ಲಿರುವ ವಿಶಾಲವಾದ ತೆರೆದ ಜಾಗಗಳನ್ನು ನೋಡಿದ ನಂತರ, ಹೆಚ್ಚಿನ ಜನಸಂಖ್ಯೆಯನ್ನು ಸೇರಿಸಲು ಕಾರ್ಯಕ್ರಮವನ್ನು ಸುಲಭವಾಗಿ ಅಲ್ಲಿಯೇ ಆಯೋಜಿಸಬಹುದಿತ್ತು” ಎಂದು ಮುರ್ಮು ಹೇಳಿದರು.

“ಕಾರ್ಯಕ್ರಮವನ್ನು ಇಲ್ಲಿಯೇ ನಡೆಸಿದ್ದರೆ ಉತ್ತಮವಾಗಿರುತ್ತಿತ್ತು ಎಂದು ನನಗನ್ನಿಸಿತು. ಈ ಪ್ರದೇಶವು ತುಂಬಾ ವಿಶಾಲವಾಗಿದೆ. ಇಲ್ಲಿ ಸುಲಭವಾಗಿ ಐದು ಲಕ್ಷ ಜನರು ಸೇರಬಹುದಿತ್ತು” ಎಂದು ಅವರು ತಿಳಿಸಿದರು.

“ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಆಶಿಸಿದ್ದ ಜನರು, ಕಾರ್ಯಕ್ರಮದ ಸ್ಥಳದ ಕಾರಣದಿಂದ ಅಲ್ಲಿಗೆ ತಲುಪಲು ಸಾಧ್ಯವಾಗದಿರುವುದು ತಮಗೆ ತೀವ್ರ ಬೇಸರ ತಂದಿದೆ” ಎಂದು ತಿಳಿಸಿದರು.

ರಾಷ್ಟ್ರಪತಿಯವರ ಭೇಟಿಯ ಸಮಯದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸಚಿವರ ಅನುಪಸ್ಥಿತಿ ಭಾರೀ ಚರ್ಚೆಗೆ ಕಾರಣವಾಗಿದೆ. ಶಿಷ್ಟಾಚಾರವನ್ನು ಪಾಲನೆ ಮಾಡಿಲ್ಲ ಎಂದು ಆರೋಪಿಸಲಾಗುತ್ತಿದೆ.

ಶಿಷ್ಟಾಚಾರದ ಪ್ರಕಾರ, ರಾಜ್ಯಕ್ಕೆ ಅಧಿಕೃತ ಭೇಟಿ ನೀಡುವ ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ಮುಖ್ಯಮಂತ್ರಿ ಅಥವಾ ಕನಿಷ್ಠ ಒಬ್ಬ ಹಿರಿಯ ಸಚಿವರು ಹಾಜರಿರಬೇಕು. ಆದರೆ, ವಿಮಾನ ನಿಲ್ದಾಣದಲ್ಲಿ ಮುರ್ಮು ಅವರನ್ನು ಸ್ವಾಗತಿಸಲು ಉಪಸ್ಥಿತರಿದ್ದ ಏಕೈಕ ರಾಜಕೀಯ ಪ್ರತಿನಿಧಿ ಎಂದರೆ ಸಿಲಿಗುರಿ ಮೇಯರ್ ಗೌತಮ್ ದೇಬ್ ಮಾತ್ರ.

ರಾಷ್ಟ್ರಪತಿಗಳು ಮುಖ್ಯಮಂತ್ರಿಗಳ ಅನುಪಸ್ಥಿತಿ ಕುರಿತು ಗಮನ ಸೆಳೆದರು. “ರಾಷ್ಟ್ರಪತಿಗಳು ಒಂದು ಸ್ಥಳಕ್ಕೆ ಭೇಟಿ ನೀಡಿದಾಗ, ಮುಖ್ಯಮಂತ್ರಿಗಳು ಮತ್ತು ಸಚಿವರೂ ಸಹ ಬರಬೇಕು” ಎಂದು ಹೇಳಿದರು.

“ತಾವು ಬಂಗಾಳದ ಮಗಳು ಎಂದು ಹೇಳಿದ ಅವರು, ಮಮತಾ ಬ್ಯಾನರ್ಜಿಯವರನ್ನು ತಮ್ಮ ತಂಗಿ ಎಂದು ಸಂಬೋಧಿಸಿದರು. ಅಲ್ಲದೆ, ಮುಖ್ಯಮಂತ್ರಿಯವರು ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆಯೇ? ಎಂದು ನನಗೆ ತಿಳಿದಿಲ್ಲ” ಎಂದರು.

ಆರೋಪ ತಳ್ಳಿಹಾಕಿದ ಮಮತಾ ಬ್ಯಾನರ್ಜಿ: ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, “ಯಾವುದೇ ಶಿಷ್ಟಾಚಾರದ ಉಲ್ಲಂಘನೆಯೂ ಆಗಿಲ್ಲ. ರಾಷ್ಟ್ರಪತಿ ಕಾರ್ಯಾಲಯವು ಹಂಚಿಕೊಂಡಿದ್ದ ಅನುಮೋದಿತ ಪಟ್ಟಿಯಂತೆಯೇ ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲಾಗಿದೆ ಮತ್ತು ಬೀಳ್ಕೊಡಲಾಗಿದೆ” ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದರು.

“ಸಿಲಿಗುರಿ ಮಹಾನಗರ ಪಾಲಿಕೆಯ ಮೇಯರ್, ಡಾರ್ಜಿಲಿಂಗ್ ಜಿಲ್ಲಾಧಿಕಾರಿ ಮತ್ತು ಸಿಲಿಗುರಿ ಪೊಲೀಸ್ ಕಮಿಷನರೇಟ್‌ನ ಕಮಿಷನರ್ ರಾಷ್ಟ್ರಪತಿಗಳನ್ನು ಸ್ವಾಗತಿಸಿದ್ದರು. ಸಮ್ಮೇಳನದ ಆಯೋಜಕರು ಸಮರ್ಪಕವಾಗಿ ಸಿದ್ಧತೆ ಮಾಡಿಕೊಂಡಿರಲಿಲ್ಲ. ಜಿಲ್ಲಾಡಳಿತದ ಕಡೆಯಿಂದ ಯಾವುದೇ ಲೋಪವಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ವಿವರವಾದ ವರದಿ ಕೇಳಿದ ಕೇಂದ್ರ: ಈ ವಿವಾದ ತೀವ್ರಗೊಳ್ಳುತ್ತಿದ್ದಂತೆ ರಾಷ್ಟ್ರಪತಿಗಳ ಭೇಟಿಯ ಅವ್ಯವಸ್ಥೆ ಬಗ್ಗೆ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದಿಂದ ವರದಿಯನ್ನು ಕೇಳಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯವರಿಗೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಇತ್ತೀಚಿನ ರಾಜ್ಯ ಭೇಟಿಯ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಶಿಷ್ಟಾಚಾರದ ಲೋಪಗಳ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಗೃಹ ಸಚಿವಾಲಯದ ಆಕ್ಷೇಪ: ANI ವರದಿಯ ಪ್ರಕಾರ ಹಲವು ವಿಷಯಗಳ ಬಗ್ಗೆ ವರದಿಯನ್ನು ಕೇಳಲಾಗಿದೆ. ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ನಿಗದಿಪಡಿಸಿದ ಶಿಷ್ಟಾಚಾರವನ್ನು ಪಾಲಿಸದಿರುವುದು, ಅಂತರಾಷ್ಟ್ರೀಯ ಸಂತಾಲ್ ಸಮ್ಮೇಳನದ ಸ್ಥಳವನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸಿದ್ದು, ಪ್ರಯಾಣದ ಮಾರ್ಗದಲ್ಲಿನ ಬದಲಾವಣೆಗಳು ಮತ್ತು ಅವರ ಭೇಟಿಯ ಸಮಯದಲ್ಲಿ ಮಾಡಲಾದ ಇತರ ವ್ಯವಸ್ಥೆಗಳ ಬಗ್ಗೆ ವಿವರಣೆ ಕೋರಲಾಗಿದೆ.

ರಾಷ್ಟ್ರಪತಿಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ರಾಜ್ಯದ ಪ್ರಮುಖ ಅಧಿಕಾರಿಗಳು ಏಕೆ ಹಾಜರಿರಲಿಲ್ಲ? ಎಂಬ ಬಗ್ಗೆಯೂ ಕೇಂದ್ರ ಗೃಹ ಸಚಿವಾಲಯವು ಸ್ಪಷ್ಟೀಕರಣ ಕೇಳಿದೆ.

ಇದಲ್ಲದೆ, ಕಾರ್ಯಕ್ರಮದ ಸ್ಥಳದಲ್ಲಿ ಸೌಲಭ್ಯಗಳ ಕೊರತೆ ಮತ್ತು ರಾಷ್ಟ್ರಪತಿಗಳ ಪ್ರಯಾಣದ ಮಾರ್ಗದಲ್ಲಿನ ಸಮಸ್ಯೆಗಳು ಸೇರಿದಂತೆ ಭೇಟಿಯ ಅವಧಿಯಲ್ಲಿ ಕಂಡುಬಂದ ಹಲವಾರು ಲೋಪಗಳನ್ನು ಕೇಂದ್ರವು ಎತ್ತಿ ತೋರಿಸಿದೆ.

ಈ ಲೋಪಗಳಿಗೆ ಸಂಬಂಧಿಸಿದಂತೆ ಡಾರ್ಜಿಲಿಂಗ್ ಜಿಲ್ಲಾಧಿಕಾರಿ, ಸಿಲಿಗುರಿ ಪೊಲೀಸ್ ಕಮಿಷನರ್ ಮತ್ತು ಅಪರ ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯ ಅಧಿಕಾರಿಗಳ ವಿರುದ್ಧ ಇದುವರೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಂದು ಕೇಂದ್ರ ಸರ್ಕಾರವು ಪ್ರಶ್ನಿಸಿದೆ.

ರಾಷ್ಟ್ರಪತಿಗಳ ಭೇಟಿ ನಿರ್ವಹಿಸಿದ ರೀತಿಯ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಡುವೆ ರಾಜಕೀಯ ಸಂಘರ್ಷ ಬೆಳೆಯುತ್ತಿದೆ. ಈ ಘಟನೆಯು ಟಿಎಂಸಿ ಸರ್ಕಾರದ ಗಂಭೀರ ಆಡಳಿತಾತ್ಮಕ ವೈಫಲ್ಯ ಎಂದು ಬಿಜೆಪಿ ನಾಯಕರು ದೂರಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ್ದಾರೆ ಮತ್ತು ರಾಷ್ಟ್ರಪತಿ ಹುದ್ದೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಎಲ್ಲಾ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, “ಇತರ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಇದೇ ರೀತಿಯ ಆಕ್ರೋಶ ಏಕೆ ವ್ಯಕ್ತವಾಗಲಿಲ್ಲ? ಎಂದು ಪ್ರಶ್ನಿಸಿದರು. ಅಲ್ಲದೆ, ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಬಿಜೆಪಿ ಈ ವಿಷಯವನ್ನು ರಾಜಕೀಯ ವಿವಾದವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.”

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular