ಬೆಂಗಳೂರು : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಲಭ್ಯತೆ ಹಾಗೂ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಹತ್ವದ ಸುತ್ತೋಲೆ ಹೊರಡಿಸಿದೆ. ಔಷಧಿಗಳ ಖರೀದಿ ಪ್ರಕ್ರಿಯೆ ನಿಲ್ಲಿಸಿ, ಕೇವಲ ಸರ್ಕಾರ ನೀಡುವ ಪೂರೈಕೆಯನ್ನಷ್ಟೇ ಬಳಸುವುದಾಗಿ ಹೇಳಿದ್ದ ವೈದ್ಯಾಧಿಕಾರಿಗಳ ಸಂಘದ ನಿರ್ಧಾರಕ್ಕೆ ಇಲಾಖೆ ಬ್ರೇಕ್ ಹಾಕಿದೆ.
ಇತ್ತೀಚೆಗೆ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು, ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಾದರೂ ಸ್ಥಳೀಯವಾಗಿ ಖರೀದಿ ಮಾಡದೆ, ಕೇವಲ ಇಲಾಖೆ ಸರಬರಾಜು ಮಾಡುವ ಔಷಧಿಗಳನ್ನಷ್ಟೇ ಬಳಸುವುದಾಗಿ ತಿಳಿಸಿತ್ತು. ಆದರೆ, ಇದು ನಿಯಮಬಾಹಿರ ಮತ್ತು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಆಯುಕ್ತಾಲಯ ತಿಳಿಸಿದೆ.
ಏನಿದೆ ಸುತ್ತೋಲೆಯಲ್ಲಿ..?
ಸ್ಥಳೀಯ ಖರೀದಿಗೆ ಸೂಚನೆ: ರೋಗಿಗಳಿಗೆ ತೊಂದರೆಯಾಗದಂತೆ ತಡೆಯಲು AB-ArK, ARS ಮತ್ತು ಲಭ್ಯವಿರುವ ಇತರೆ ಅನುದಾನಗಳನ್ನು ಬಳಸಿ, KTPP ನಿಯಮಾವಳಿ ಹಾಗೂ GeM ಪೋರ್ಟಲ್ ಮೂಲಕ ಅಗತ್ಯ ಔಷಧಿಗಳನ್ನು ಖರೀದಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
ಹೊಣೆಗಾರಿಕೆ ನಿಗದಿ: ಔಷಧಿ ಖರೀದಿ ಮಾಡದೆ ಅಲಭ್ಯತೆ ಉಂಟಾದಲ್ಲಿ ಅಥವಾ ರೋಗಿಗಳಿಂದ ದೂರುಗಳು ಬಂದಲ್ಲಿ ಆಯಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
ಶಿಸ್ತು ಕ್ರಮದ ಎಚ್ಚರಿಕೆ: ನಿಯಮಗಳನ್ನು ಗಾಳಿಗೆ ತೂರಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದಂತೆ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸುವುದಾಗಿ ಆಯುಕ್ತರು ಎಚ್ಚರಿಸಿದ್ದಾರೆ.ಸಾರ್ವಜನಿಕ ಆರೋಗ್ಯ ರಕ್ಷಣೆ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ಯಾವುದೇ ಕಾರಣಕ್ಕೂ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.


