HomeKarnatakaರಾಜ್ಯದಲ್ಲಿ ಕಳೆದ 75 ವರ್ಷಗಳಲ್ಲೇ ಕಾಣದಂತಹ ಭೀಕರ ಬರಗಾಲ: ಡಿಸಿಎಂ ಡಾ.ಜಿ. ಪರಮೇಶ್ವರ್

ರಾಜ್ಯದಲ್ಲಿ ಕಳೆದ 75 ವರ್ಷಗಳಲ್ಲೇ ಕಾಣದಂತಹ ಭೀಕರ ಬರಗಾಲ: ಡಿಸಿಎಂ ಡಾ.ಜಿ. ಪರಮೇಶ್ವರ್

ಬಳ್ಳಾರಿ: ಕರ್ನಾಟಕದಲ್ಲಿ ಕಳೆದ 75 ವರ್ಷಗಳಲ್ಲೇ ಕಾಣದಂತಹ ಭೀಕರ ಬರಗಾಲ ಎದುರಾಗಿದ್ದು, ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ನಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರೂ ಆದ ಡಾ.ಜಿ. ಪರಮೇಶ್ವರ್ ಅವರು ಹೇಳಿದರು.

ಬುಧವಾರ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಮಳೆ ಕೊರತೆಯಿಂದ ಹೊಲದಲ್ಲಿ ಒಣಗುತ್ತಿರುವ ತೊಗರಿ ಬೆಳೆಗಳನ್ನು ಖುದ್ದು ವೀಕ್ಷಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬರಪೀಡಿತ ತಾಲೂಕುಗಳ ಘೋಷಣೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರಾವಳಿ ತೀರದ 10–15 ತಾಲೂಕುಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ಭಾಗಗಳಲ್ಲಿ ಭೀಕರ ಬರ ಆವರಿಸಿದೆ. ಈಗಾಗಲೇ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಉಳಿದ 23 ತಾಲೂಕುಗಳಲ್ಲಿ ಕ್ಷೇತ್ರಗಳ ವಾಸ್ತವಿಕ ಪರಿಶೀಲನೆ ನಡೆಯುತ್ತಿದ್ದು, ಅವುಗಳಲ್ಲಿಯೂ 10 ರಿಂದ 15 ತಾಲೂಕುಗಳನ್ನು ಶೀಘ್ರವೇ ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು. ರಾಜ್ಯದಲ್ಲಿ ಶೇಕಡಾ 90 ರಷ್ಟು ಬೆಳೆ ಹಾನಿಯಾಗಿದೆ. ರೈತರು ಬೆಳೆದ ತೊಗರಿ, ಜೋಳ ಸಂಪೂರ್ಣ ನೆಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಮತ್ತು ಅನುದಾನ:

ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಪರಿಸ್ಥಿತಿ ನಿಭಾಯಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ರೂ. 306 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣವನ್ನು ಬಳಸಿಕೊಂಡು ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಮೊದಲ ಕಂತಿನ ಪರಿಹಾರ:

ರೈತರಿಗೆ ತಕ್ಷಣದ ನೆರವಿಗಾಗಿ ಮೊದಲ ಕಂತಿನಲ್ಲಿ ರೂ. 2,500 ಬರ ಪರಿಹಾರವನ್ನು ರಾಜ್ಯ ಸರ್ಕಾರವೇ ಬಿಡುಗಡೆ ಮಾಡಲು ಆದೇಶ ಹೊರಡಿಸಿದ್ದು, ಶೀಘ್ರ ರೈತರಿಗೆ ಪಾವತಿಯಾಗಲಿದೆ. ಬರದಿಂದಾಗಿ ರಾಜ್ಯಕ್ಕೆ ಒಟ್ಟು ರೂ. 46,000 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ. ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ರಾಜ್ಯ ಸರ್ಕಾರವು 11,000 ಕೋಟಿ ನೆರವು ನೀಡುವಂತೆ ಕೇಂದ್ರಕ್ಕೆ ಎರಡು ಬಾರಿ ಮನವಿ ಸಲ್ಲಿಸಿದೆ. ಕೇಂದ್ರ ಬರ ಅಧ್ಯಯನ ತಂಡ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅವರು ನೀಡುವ ವರದಿಯ ಆಧಾರದಲ್ಲಿ ಶೀಘ್ರವೇ ಕೇಂದ್ರದಿಂದ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು.

ರೈತರ ಸಾಲ ವಸೂಲಾತಿ ಮುಂದೂಡಿಕೆ:

ಸAಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ನಿಲ್ಲಲಿದ್ದು, ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಬಾರದು ಎಂದು ಮನವಿ ಮಾಡಿದ ಉಪಮುಖ್ಯಮಂತ್ರಿಗಳು, ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ವಸೂಲಾತಿಯನ್ನು ವರ್ಷಕಾಲ ಮುಂದೂಡಲು ಸೂಚನೆ ನೀಡಲಾಗಿದೆ. ಇದಲ್ಲದೆ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ವಿದ್ಯುತ್ ಸಬ್ಸಿಡಿ ಮೂಲಕ ಬಡ ಹಾಗೂ ರೈತ ಕುಟುಂಬಗಳಿಗೆ ವಾರ್ಷಿಕ 60,000 ದಿಂದ 70,000 ಕೋಟಿ ರೂ. ಆರ್ಥಿಕ ನೆರವು ತಲುಪುತ್ತಿದೆ. ಬರ ಪರಿಹಾರ ಕಾಮಗಾರಿಗಳೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ರೈತರೊಂದಿಗೆ ಸಂವಾದ:

ಇದಕ್ಕೂ ಮುನ್ನ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು, ರೈತರೊಂದಿಗೆ ಸಮಾಲೋಚನೆ ನಡೆಸಿ, ಬೆಳೆ ನಷ್ಟ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ರೈತ ದುರ್ಗಣ್ಣ ಅವರು, ಒಂದು ಎಕರೆ ತೊಗರಿ ಬೆಳೆಯಲು ಈವರೆಗೆ ಸುಮಾರು 15 ಸಾವಿರ ವೆಚ್ಚವಾಗಿದೆ. ಸಮಯಕ್ಕೆ ಸರಿಯಾಗಿ ಉತ್ತಮ ಮಳೆಯಾಗಿದ್ದರೆ ಪ್ರತಿ ಎಕರೆಗೆ 5ರಿಂದ 6 ಕ್ವಿಂಟಲ್‌ ವರೆಗೆ ತೊಗರಿ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಬೆಳೆ ಒಣಗಿ ಸಂಪೂರ್ಣ ಹಾನಿಗೀಡಾಗಿದೆ. ಯಾವುದೇ ಇಳುವರಿ ಬಾರದ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಭಾರಿ ನಷ್ಟವಾಗಿದೆ. ಆದ್ದರಿಂದ ಸರ್ಕಾರ ರೈತರ ಬೆಳೆ ನಷ್ಟವನ್ನು ಪರಿಗಣಿಸಿ, ಸೂಕ್ತ ಪರಿಹಾರ ಒದಗಿಸಬೇಕು, ಅಲ್ಲದೆ ಬೆಳೆ ವಿಮೆ ಪರಿಹಾರವನ್ನೂ ಒದಗಿಸಬೇಕು ಎಂದು ಉಪಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ಸೂರೆನ್ಸ್ ಕಂಪನಿಯವರಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೈತರು ಧೃತಿಗೆಡಬಾರದು, ವಿಮಾ ಕಂಪನಿಗಳಿಂದ ರೈತರಿಗೆ ಬರಬೇಕಾದ ಪರಿಹಾರದ ಹಣವನ್ನು ಕೊಡಿಸಿಯೇ ತೀರುತ್ತೇವೆ, ಅದಕ್ಕಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸ್ಥಳದಲ್ಲೇ ಭರವಸೆ ನೀಡಿದರು.

ಬಳಿಕ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು, ಬಿ.ಬೆಳಗಲ್ ಗ್ರಾಮಕ್ಕೆ ಭೇಟಿ ನೀಡಿ, ಮಳೆ ಕೊರತೆಯಿಂದ ಹಾನಿಗೊಳಗಾಗಿರುವ ತೊಗರಿ ಹಾಗೂ ಸಜ್ಜೆ ಬೆಳೆಗಳ ಜಮೀನುಗಳನ್ನು ಪರಿಶೀಲಿಸಿದರು. ಮಳೆಯ ಅಭಾವದಿಂದ ತೊಗರಿ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗದೆ ಕುಂಠಿತಗೊಂಡಿರುವುದು ಹಾಗೂ ಸಜ್ಜೆ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿರುವುದು ಸ್ಥಳ ಪರಿಶೀಲನೆ ವೇಳೆ ಕಂಡುಬAದಿತು.

ಈ ಸಂದರ್ಭದಲ್ಲಿ ರೈತರಾದ ಮಲ್ಲಿಕಾರ್ಜುನಗೌಡ ಹಾಗೂ ತಿಪ್ಪೇರುದ್ರಪ್ಪ ಅವರೊಂದಿಗೆ ನೇರವಾಗಿ ಮಾತಿಗಿಳಿದು, ಬೆಳೆ ಹಾನಿ, ಮಳೆ ಕೊರತೆ ಹಾಗೂ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ರೈತರ ಅಹವಾಲುಗಳನ್ನು ಆಲಿಸಿದ ಡಿಸಿಎಂ ಅವರು, ಬರ ಪರಿಸ್ಥಿತಿಯಿಂದ ರೈತರಿಗೆ ಉಂಟಾಗಿರುವ ತೊಂದರೆಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್. ಎನ್., ಉಪವಿಭಾಗಾಧಿಕಾರಿ ರಾಜೇಶ್ ಹೆಚ್.ಡಿ., ಜಂಟಿ ಕೃಷಿ ನಿರ್ದೇಶಕ ಕೆ.ಸೋಮಸುಂದರ್, ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ, ಬಳ್ಳಾರಿ ತಾಲೂಕು ತಹಶೀಲ್ದಾರರಾದ ಟಿ.ರೇಖಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಹಾಜರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular