ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಶುಕ್ರವಾರ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ಲಕ್ಷಾಂತರ ಭಕ್ತರ ನಡುವೆ ಬಾವುಟಗಳಿಂದ ಅಲಂಕೃತಗೊಂಡ ಮಹಾ ರಥದಲ್ಲಿ ಮಧ್ಯಾಹ್ನ 3 ಗಂಟೆಗೆ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ದೈವಸ್ಥರ ಸಮ್ಮುಖದಲ್ಲಿ ಮುಕ್ತಿ ಬಾವುಟ ಹರಾಜು ನಡೆಸಿ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವರ ಮುಕ್ತಿ ಬಾವುಟವನ್ನು ಶಿರಾ ತಾಲೂಕಿನ ಹೆಂಜಲಗೆರೆಯ ಶ್ರೀನಾಥ್ ಹರಾಜಿನಲ್ಲಿ 32 ಲಕ್ಷ ರೂ.ಗೆ ಪಡೆದುಕೊಂಡಿದ್ದಾರೆ. ರಥ ಹೆಳೆಯುವ ಮೊದಲು ದೇವರ ಮುಕ್ತಿ ಬಾವುಟವನ್ನು ಬಹಿರಂಗವಾಗಿ ಹರಾಜು ಮಾಡಲಾಗುತ್ತದೆ. 11 ಲಕ್ಷ ರೂ. ನಿಂದ ಆರಂಭವಾದ ಹಾರಾಜು 31 ಲಕ್ಷ ರೂ. ವರೆಗೂ ಹೋಯಿತು. ನಂತರ ಶ್ರೀನಾಥ್ 32 ಲಕ್ಷ ರೂ.ಗೆ ಹರಾಜು ಕೂಗಿ ಮುಕ್ತಿ ಬಾವುಟ ಪಡೆದುಕೊಂಡರು.
ಮುಕ್ತಿ ಬಾವುಟವನ್ನು ಪಡೆದುಕೊಂಡರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದ್ದು, ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು ಹರಾಜಿನಲ್ಲಿ ಮುಕ್ತಿ ಬಾವುಟ ಖರೀದಿಸುತ್ತಾರೆ. ಈ ಬಾರಿ 32 ಲಕ್ಷ ರೂ.ಗೆ ಶ್ರೀನಾಥ್ ಪಡೆದುಕೊಂಡಿದ್ದಾರೆ.

