ಬೆಂಗಳೂರು : ರಾಜ್ಯದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಜನಸಾಮಾನ್ಯರ ಬಜೆಟ್ ಸಂಪೂರ್ಣ ಏರುಪೇರಾಗಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ ಎಂಬ ಆತಂಕ ಮನೆ ಮಾಡಿದೆ.
ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮದ ನಡುವೆಯೇ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅಡುಗೆ ಎಣ್ಣೆ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ ಎನ್ನಲಾಗಿದೆ.
ಅಡುಗೆ ಎಣ್ಣೆ ದರದಲ್ಲಿ ಏರಿಕೆ : ಅಡುಗೆ ಎಣ್ಣೆಯ ಬೆಲೆ ಲೀಟರ್ಗೆ 5 ರೂ ಹೆಚ್ಚಳವಾಗುವ ಸಾಧ್ಯತೆಯಿದೆ. ಇರಾನ್-ಇಸ್ರೇಲ್ ನಡುವಿನ ಯುದ್ಧದ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅಡುಗೆ ಎಣ್ಣೆಯ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಗ್ಯಾಸ್ ಬೆಲೆ ಏರಿಕೆ: ಯುದ್ಧದ ಪರಿಣಾಮ ಗ್ಯಾಸ್ ಬೆಲೆ ಏರಿಕೆಯಾಗಲಿದೆ ಎನ್ನಲಾಗಿದ್ದು, ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ.
ಡ್ರೈ ಫ್ರೂಟ್ಸ್ ದರ ಏರಿಕೆ
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಭಾರತಕ್ಕೆ ಆಮದಾಗುವ ಒಣ ಹಣ್ಣುಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ವಿಶೇಷವಾಗಿ ಇರಾನ್ನಿಂದ ಬರುವ ಪಿಸ್ತಾ, ಬಾದಾಮಿ ಮತ್ತು ಅಂಜೂರದ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ .
ಪೆಟ್ರೋಲ್ ಮತ್ತು ಡೀಸೆಲ್ ದರ
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಇದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ನೇರ ಪರಿಣಾಮ ಬೀರಲಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.
ಇತರ ವಸ್ತುಗಳ ಮೇಲೂ ಪರಿಣಾಮ: ಸಾರಿಗೆ ವೆಚ್ಚ ಹೆಚ್ಚಳವಾಗುವ ಭೀತಿಯಿಂದಾಗಿ ಮುಂದಿನ ದಿನಗಳಲ್ಲಿ ತರಕಾರಿ, ಬೇಳೆಕಾಳುಗಳು ಮತ್ತು ಇತರ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಮೊಟ್ಟೆ ಉದ್ಯಮ ಸಂಕಷ್ಟದಲ್ಲಿ, ಬೆಲೆ ಇಳಿಕೆ ಸಾಧ್ಯತೆ : ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಗಲ್ಫ್ ರಾಷ್ಟ್ರಗಳಿಗೆ ನಡೆಯುತ್ತಿದ್ದ ಮೊಟ್ಟೆ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಭಾರತದ ಪ್ರಮುಖ ಮೊಟ್ಟೆ ಉತ್ಪಾದನಾ ಕೇಂದ್ರವಾದ ತಮಿಳುನಾಡಿನ ನಾಮಕ್ಕಲ್ ಮತ್ತು ಕರ್ನಾಟಕದ ಮೊಟ್ಟೆ ಉದ್ಯಮಕ್ಕೆ ಭಾರಿ ನಷ್ಟವುಂಟಾಗುತ್ತಿದೆ.
ಯುದ್ಧದ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳ ವಿಮಾನ ನಿಲ್ದಾಣಗಳು ಮತ್ತು ಹಡಗು ಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಿದೆ. ದುಬೈ, ಒಮಾನ್ ಮತ್ತು ಕತಾರ್ಗೆ ಪ್ರತಿದಿನ ಹೋಗುತ್ತಿದ್ದ ಕೋಟ್ಯಂತರ ಮೊಟ್ಟೆಗಳ ರಫ್ತು ಈಗ ನಿಂತುಹೋಗಿದೆ. ವಿದೇಶಕ್ಕೆ ಹೋಗಬೇಕಿದ್ದ ಮೊಟ್ಟೆಗಳು ಸ್ಥಳೀಯ ಮಾರುಕಟ್ಟೆಗೆ ಬರುತ್ತಿರುವುದರಿಂದ ಮೊಟ್ಟೆಯ ಸಗಟು ದರದಲ್ಲಿ ಇಳಿಕೆಯಾಗಲಿದೆ ಎನ್ನಲಾಗಿದೆ.

