ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಮಾರ್ಚ್ 10ರ ಬಳಿಕ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ. ಉಪ ಚುನಾವಣೆಗೆ ಬಿಜೆಪಿಯ ತಯಾರಿ ಜೋರಾಗಿಯೇ ನಡೆದಿದೆ.
ಗುರುವಾರ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ದಾವಣಗೆರೆ ನಗರಕ್ಕೆ ಆಗಮಿಸಿದ್ದಾರೆ. ಪಕ್ಷದ ವಿವಿಧ ನಾಯಕರು ಅವರನ್ನು ಭೇಟಿ ಮಾಡಿದರು.
ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಈ ಕುರಿತು ಪೋಸ್ಟ್ ಹಾಕಿದ್ದು, ‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಇಂದು ದಾವಣಗೆರೆ ನಗರಕ್ಕೆ ಆಗಮಿಸಿದ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಸ್ತುವಾರಿಗಳಾದ ರಾಧಾ ಮೋಹನ್ ದಾಸ್ ಅಗರ್ವಾಲ್ ನಗರದ ಅಪೂರ್ವ ರೆಸಾರ್ಟ್ ನಲ್ಲಿ ಭೇಟಿ ಮಾಡಲಾಯಿತು’ ಎಂದು ಹೇಳಿದ್ದಾರೆ.
ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಕರುಣಾಕರ ರೆಡ್ಡಿ ಸೇರಿದಂತೆ ವಿವಿಧ ನಾಯಕರು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಿಜೆಪಿ ಇನ್ನೂ ಸಹ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ದಾವಣಗೆರೆ ಜಿಲ್ಲಾ ಬಿಜೆಪಿ ಘಟಕ ಎರಡು ಬಣವಾಗಿ ವಿಭಾಗವಾಗಿದೆ. ಆದ್ದರಿಂದ ಉಪ ಚುನಾವಣೆ ದಿನಾಂಕ ಘೋಷಣೆಗೂ ಮೊದಲು ರಾಧಾ ಮೋಹನ್ ದಾಸ್ ಅಗರ್ವಾಲ್ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಇದುವರೆಗೂ ಬಿಜೆಪಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗೆದ್ದಿಲ್ಲ. ಶಾಮನೂರು ಶಿವಶಂಕರಪ್ಪ ಅನುಪಸ್ಥಿತಿಯಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಗೆದ್ದು, ಕ್ಷೇತ್ರವನ್ನು ವಶಕ್ಕೆ ಪಡೆಯಲು ಪ್ರತಿಪಕ್ಷ ಬಿಜೆಪಿ ತಂತ್ರವನ್ನು ರೂಪಿಸುತ್ತಿದೆ.
ದಾವಣಗೆರೆ ದಕ್ಷಿಣದ ಉಪ ಚುನಾವಣೆ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಭಾರೀ ಪೈಪೋಟಿ ಇದೆ. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಬಣದಿಂದ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಶ್ರೀನಿವಾಸ್ ದಾಸಕರಿಯಪ್ಪ ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿದೆ.
ಎಂ.ಪಿ. ರೇಣುಕಾಚಾರ್ಯ ಬಣದಿಂದ ಕಳೆದ ಬಾರಿ ಸೋಲು ಕಂಡಿದ್ದ ಅಜಯ್ ಕುಮಾರ್ಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಕೂಗು ಕೇಳಿಬರುತ್ತಿದೆ. ಸ್ಥಳೀಯ ನಾಯಕರ ಜೊತೆ ರಾಧಾ ಮೋಹನ್ ದಾಸ್ ಅಗರ್ವಾಲ್ ಸಭೆ ನಡೆಸಿ ಅಭ್ಯರ್ಥಿ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

